ಬೆಂಗಳೂರು: ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರಿಗೆ ಉದ್ಯೋಗ ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸುವಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದರು.
ವಿಕಾಸಸೌಧದಲ್ಲಿ ಇಂದು ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಹಳ್ಳಿಗಳಿಗೆ ಹಿಂದಿರುಗಿದ್ದು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಎಲ್ಲರಿಗೂ ಜಾಬ್ ಕಾರ್ಡ್ ನೀಡಿ ಎಲ್ಲರಿಗೂ ಕೆಲಸ ಒದಗಿಸಲಾಗುವುದು.
ಕೆ.ಎಂ.ಎಫ್ ಹಾಲಿನ ಸೊಸೈಟಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನು ಸದಸ್ಯರನ್ನಾಗಿ ನೋಂದಾಯಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹಾಲು ಉತ್ಪಾದನೆಯನ್ನು ಕೈಗೊಳ್ಳಲು ಉತ್ತೇಜಿಸಲು ಕರು, ಹಸು ಎಮ್ಮೆಗಳನ್ನು ಸಾಲ ಮತ್ತು ಸಹಾಯಧನದಲ್ಲಿ ಒದಗಿಸಲು ಯೋಜನೆಯನ್ನು ರೂಪಿಸಬೇಕು. ಕೆ.ಎಂ.ಎಫ್ ಮಳಿಗೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಂಚಿಕೆ ಮಾಡಿ ಹಾಲು ಉತ್ಪನ್ನಗಳನ್ನು ಮಾರಲು ಅವಕಾಶ ಕಲ್ಪಿಸಬೇಕು. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆ.ಎಂ.ಎಫ್ ಹಾಲಿನ ಸೊಸೈಟಿಗಳನ್ನು ಸ್ಥಾಪಿಸಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ತರಕಾರಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕು. ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಪ್ಕಾಮ್ಸ್ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರನ್ನು ಸದಸ್ಯರನ್ನಾಗಿ ನೋಂದಾಯಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಹಾಪ್‍ಕಾಮ್ಸ್ ಮೂಲಕ ವಿವಿಧ ಇಲಾಖೆಗಳ ವಸತಿ ನಿಲಯಗಳು ಮತ್ತು ವಸತಿ ಶಾಲೆಗಳಿಗೆ ತರಕಾರಿ ಸರಬರಾಜು ಮಾಡಬೇಕು. ಹಾಪ್ಕಾಮ್ಸ್ನಿಂದ ತರಕಾರಿ ಮತ್ತು ಹಣ್ಣುಗಳಿಗೆ ನಿಗದಿಪಡಿಸಿರುವ ದರವನ್ನು ಆಯಾ ಇಲಾಖೆಗಳು ಭರಿಸುವಂತೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಲೆಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಮಿಡ್ ಡೇ ಮೀಲ್ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಮತ್ತು ಇತರೆ ಮಕ್ಕಳಿಗೆ ಆಹಾರ ಧಾನ್ಯಗಳನ್ನು ಮನೆಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ವರ್ಕ್ ಪುಸ್ತಕಗಳನ್ನು ಮನೆಗೆ ಸರಬರಾಜು ಮಾಡಬೇಕು. ಟಿವಿ, ರೇಡಿಯೋ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪಾಠದ ವ್ಯವಸ್ಥೆ ಮಾಡಬೇಕು. ವಲಸೆ ಕಾರ್ಮಿಕರು ಮರಳಿ ಬಂದಿದ್ದು, ಇವರ ಮಕ್ಕಳು ಶಾಲೆ ಬಿಡದಂತೆ ಕ್ರಮ ವಹಿಸಬೇಕು. ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಕಾರ್ಯಕ್ರಮಗಳಡಿ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಎಲ್ಲಾ ಮಂಡಳಿಗಳು ಕ್ರಮ ಕೈಗೊಳ್ಳಬೇಕು. ಮಂಡಳಿಗಳು ಮಹಿಳೆಯರು ಮತ್ತು ನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.