ಬೆಂಗಳೂರು : ಬೆಳಗ್ಗೆಯಿಂದ ಸುಮಾರು 4 ಸಾವಿರ ಅರ್ಜಿಗಳನ್ನು ಈಗಾಗಲೇ ದಾಖಲು ಮಾಡಿಕೊಂಡಿದ್ದೇವೆ. ಇನ್ನೂ ಕೆಲವರು ಕಾಯುತ್ತಿದ್ದಾರೆ, ಅವರಿಂದ ಮತ್ತೆ ಅರ್ಜಿ ಸ್ವೀಕರಿಸಲಾಗುವುದು. ಜನರ ಅಹವಾಲುಗಳನ್ನು ತ್ವರಿತ ವಿಲೇವಾರಿ ಮಾಡಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಕೆ. ಆರ್ ಪುರದ ಐಟಿಐ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಅರ್ಜಿಗಳನ್ನು ಒಂದೇ ದಿನ ಪರಿಹರಿಸಲು ಸಾಧ್ಯವಾಗುವುದಿಲ್ಲ. ಕುಡಿಯುವ ನೀರು, ರಸ್ತೆ, ಒಳಚರಂಡಿ, ಸ್ವಚ್ಛತೆ ಕುರಿತ ದೂರುಗಳನ್ನು ಆದ್ಯೆತಯ ಮೇರೆಗೆ ಬಗೆಹರಿಸಲಾಗುವುದು. ಈ ನಿಟ್ಟಿನಲ್ಲಿ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ವೈಯಕ್ತಿಕ ಅಹವಾಲುಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿ ಸಮಸ್ಯೆಯನ್ನು ಪರಿಹರಿಸಲಾಗುವುದು. ಕೇವಲ ನಾನು ಮಾತ್ರ ಈ ಜನರ ಮನೆ ಬಾಗಿಲಿಗೆ ಬಂದಿಲ್ಲ. ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳ ಸಮೇತ, ಪಕ್ಷಾತೀತವಾಗಿ ಜನಪ್ರತಿನಿಧಿಗಳ ಸಮೇತ ಇಡೀ ಸರಕಾರವನ್ನೇ ಜನರ ಮನೆ ಬಾಗಿಲಿಗೆ ಕರೆತರಲಾಗಿದೆ ಎಂದು ಭರವಸೆ ನೀಡಿದರು.
ಕೆಲವರು ಭ್ರಷ್ಟಾಚಾರದ ಬಗ್ಗೆ ದೂರು ನೀಡಿದ್ದಾರೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವ್ಯಾಪ್ತಿಯಲ್ಲಿ ಪಡಿತರ ವಿತರಣೆಗೆ ಲಂಚ ಪಡೆಯುತ್ತಿರುವ ಬಗ್ಗೆ ಹಾಗೂ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ದೂರು ಬಂದಿದೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಡಿಕೆಶಿ ತಿಳಿಸಿದರು.
ಲಕ್ಷ ಲಂಚ ಪಡೆದವನನ್ನು ಅಮಾನತು ಮಾಡಿ : ಕಾರ್ಯಕ್ರಮ ವೇಳೆ ಬಿಬಿಎಂಪಿಯಲ್ಲಿ ಕೆಲಸ ಮಾಡುವ ವಿನಯ್, ವೆಂಕಟೇಶ್ ಎಂಬುವರು ಎ ಖಾತೆ ಮಾಡಿಸಿಕೊಡುತ್ತೇವೆ ಎಂದು 1 ಲಕ್ಷ ರೂ. ಲಂಚ ಪಡೆದು ಮೋಸ ಮಾಡಿದ್ದಾರೆ. ನ್ಯಾಯ ಕೊಡಿಸಿ ಎಂದು ಟಿ.ಸಿ ಪಾಳ್ಯ ಆನಂದ ನಗರದ ರೀತಮ್ಮ ಎಂಬುವರು ಅಳಲು ತೋಡಿಕೊಂಡರು. ಈ ವೇಳೆ ಲಂಚ ಪಡೆದಿರುವವರನ್ನು ಯಾರು ಎಂದು ಗುರುತು ಹಿಡಿಯುವಿರಾ ಎಂದು ಡಿಸಿಎಂ ಕೇಳಿದರು. ನಂತರ ಲಂಚ ಪಡೆದ ನೌಕರರನ್ನು ಅಮಾನತು ಮಾಡಬೇಕು. ಅವರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಬೇಕು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್‌ರಿಗೆ ಸೂಚಿಸಿದರು.
ಕೆ ಆರ್ ಪುರಂ ನ್ಯಾಯಬೆಲೆ ಅಂಗಡಿಯಲ್ಲಿ ಲಂಚಕ್ಕೆ ಬೇಡಿಕೆ ಆರೋಪ : ಒಂದೊಂದು ಪಡಿತರ ಚೀಟಿ ಮಾಡಿಸಲು ಕೆ.ಆರ್ ಪುರಂ ನ್ಯಾಯಬೆಲೆ ಅಂಗಡಿಯಲ್ಲಿ 7 ಸಾವಿರ ಹಣಕ್ಕೆ ಬೇಡಿಕೆ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಕೇವಲ 3 ಕೆಜಿ ಅಕ್ಕಿ ನೀಡಿ, ರೂ. ಬೇರೆ 20 ಪಡೆದುಕೊಳ್ಳುತ್ತಿದ್ದಾರೆ ಎಂದು ರಮ್ಯಾ ಎಂಬುವರು ದೂರಿತ್ತರು.
ಈ ಮಹಿಳೆ ನಿರ್ಭೀತಿಯಿಂದ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಇವರ ಮಾತಿನಲ್ಲಿ ಸತ್ಯವಿದೆ ಎನಿಸುತ್ತಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದವರ ಲೈಸೆನ್ಸ್ ರದ್ದು ಮಾಡಬೇಕು ಎಂದು ಜಿಲ್ಲಾಧಿಕಾರಿ ದಯಾನಂದ್ ರಿಗೆ ಸೂಚನೆ ನೀಡಿದರು. ಆನಂತರ ಈ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ನೀವೇ ಮಾಹಿತಿ ನೀಡಿ ಎಂದು ಡಿಸಿಎಂ ಸೂಚಿಸಿದರು.
ಇದನ್ನೂ ಓದಿ : 'ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ'ಕ್ಕೆ ಡಿಕೆಶಿ ಚಾಲನೆ