ಬೆಂಗಳೂರು: ಯಾವಾಗಾದ್ರೂ ಸರಿ. ಚರ್ಚೆಗೆ ಸಮಯ ಫಿಕ್ಸ್ ಮಾಡಿ. ನವೆಂಬರ್ 1ರ ನಂತರ ಯಾವ ದಿನಾಂಕವಾದ್ರೂ ನಿಗದಿಪಡಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಚರ್ಚೆಗೆ ಒಪ್ಪಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡ ಬಹಿರಂಗ ಚರ್ಚೆಗೆ ಒಪ್ಪಿಗೆ ಸೂಚಿಸಿ ಸಮಯ ನಿಗದಿಪಡಿಸುವಂತೆ ಹೇಳಿದ್ದಾರೆ.
ಇಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಡಿ.ಕೆ ಶಿವಕುಮಾರ್ ಪಟಾಲಮ್ನಿಂದ ರೈತರ ಪರಿಹಾರದಲ್ಲಿ ಲೂಟಿ ಎಂಬ ಹೆಚ್ಡಿಕೆ ಆರೋಪದ ವಿರುದ್ಧ ವಾಗ್ದಾಳಿ ನಡೆಸಿದರು. "ಎನೀ ಟೈಮ್ ಚರ್ಚೆಗೆ ಟೈಮ್ ಫಿಕ್ಸ್ ಮಾಡಿ. ನವೆಂಬರ್ 1ರ ನಂತರ ದಿನಾಂಕ ನಿಗದಿಪಡಿಸಿ. ನಾನು ಏನು ಮಾಡಿದ್ದೇನೆ, ಅವರೇನು ಮಾಡಿದ್ದಾರೆ ಅನ್ನೋದನ್ನು ಅಲ್ಲೇ ಬಿಚ್ಚಿ ಮಾತಾಡೋಣ. ಗಾಳಿಯಲ್ಲಿ ಗುಂಡು ಹೊಡೆಯೋದು, ಹಿಟ್ ಆಂಡ್ ರನ್ ಮಾಡೋದಲ್ಲ" ಎಂದು ಕಿಡಿಕಾರಿದರು. ಸಮಯ ಫಿಕ್ಸ್ ಮಾಡಿ. ಅಲ್ಲಿ ಬಂದು ಎಲ್ಲವನ್ನೂ ಮಾತಾಡೋಣ ಎಂದು ಹೇಳಿ ಹೆಚ್ಡಿಕೆ ಅವರ ಬೇರೆ ಯಾವುದೇ ಆರೋಪಗಳಿಗೆ ಪ್ರತಿಕ್ರಿಯಿಸದೇ ಹೊರಟು ಹೋದರು.
ಇದನ್ನೂ ಓದಿ: 'ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು, ಬನ್ನಿ ಬಹಿರಂಗ ಚರ್ಚೆಗೆ': ಹೆಚ್‌ಡಿಕೆಗೆ ಡಿಕೆಶಿ ಸವಾಲು
ಚರ್ಚೆಗೆ ಒಪ್ಪಿದ ಹೆಚ್ಡಿಕೆ: ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸವಾಲು ಹಾಕಿದ್ದರು. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಡಿಕೆಶಿ, ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ. ರಾಮನಗರದಲ್ಲಿ ಕುಮಾರಸ್ವಾಮಿ ಆಸ್ತಿ ಮಾಡಿಲ್ಲವೇ?. ಜಮೀನು ರೇಟ್ ಎಷ್ಟಿದೆ ಕೇಳಿ?. ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಬನ್ನಿ ಚರ್ಚೆ ಮಾಡೋಣ. ಯಾವುದೇ ಮಾಧ್ಯಮದ ವೇದಿಕೆಗೆ ಬಂದರೂ ಸರಿ, ನಾನು ಬರುತ್ತೇನೆ ಎಂದು ಕುಮಾರಸ್ವಾಮಿ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದರು.
ಈ ಕುರಿತು ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬಹಿರಂಗ ಚರ್ಚೆಗೆ ಒಪ್ಪಿಗೆ ಸೂಚಿಸಿದ್ದರು. "ಡಿ.ಕೆ ಶಿವಕುಮಾರ್ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಬಹಿರಂಗ ಚರ್ಚೆಗೆ ನನ್ನ ಒಪ್ಪಿಗೆ ಇದೆ. ನಾನು ಪಲಾಯನ ಮಾಡುವುದಿಲ್ಲ. ನನ್ನ ಬಳಿ ಸಾಕಷ್ಟು ಸರಕು ಇದೆ. ಚರ್ಚೆ ಮಾಡೋಣ ಬನ್ನಿ. ನಾನು ಸಿಎಂ ಆಗಿದ್ದಾಗ ನೋವು ಅನುಭವಿಸಿಕೊಂಡು ಬಂದೆ. ಬಿಜೆಪಿ ಮೇಲೆ ಆರೋಪ ಮಾಡಿದ್ದೆ. ಅದಕ್ಕೆ ಬಿತ್ತನೆ ಹಾಕಿದ್ದು ಯಾರು? ಜೆಡಿಎಸ್ ಬಿಜೆಪಿ ಬಿ ಟೀಮ್ ಎಂದವರು ಮನೆ ಬಾಗಿಲಿಗೆ ಬಂದಿದ್ದು ಯಾರು?. ಆರ್ಥಿಕ ವಿಚಾರ ಸಂಬಂಧ ಸಿಎಂ ಶ್ವೇತಪತ್ರ ಹೊರಡಿಸಲಿ" ಎಂದಿದ್ದರು. ಇದೀಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಕೆಶಿ, ಚರ್ಚೆಗೆ ಸಮಯ ನಿಗದಿ ಮಾಡುವಂತೆ ಹೇಳಿದ್ದಾರೆ.
ಇದನ್ನೂ ಓದಿ: 'ಸಿದ್ದರಾಮಯ್ಯಗೆ ನಾನು ರಾಜಕೀಯ ವಿಲನ್'.. ಡಿಕೆಶಿ ಸವಾಲು ಸ್ವೀಕರಿಸುತ್ತೇನೆ ಎಂದ ಹೆಚ್ ಡಿ ಕುಮಾರಸ್ವಾಮಿ