ಬೆಂಗಳೂರು: ಜೆಡಿಎಸ್ ಏಕಾಂಗಿಯಾಗಿ ಆದರೂ ಚುನಾವಣೆ ಸ್ಪರ್ಧಿಸಲಿ, ಬಿಜೆಪಿ ಜೊತೆ ಮೈತ್ರಿಯಾದರೂ ಮಾಡಿಕೊಳ್ಳಲಿ. ನಾವು ಆ ಬಗ್ಗೆ ಹಿಂದೆಯೂ ತಲೆ ಕೆಡಿಸಿಕೊಂಡಿಲ್ಲ, ಮುಂದೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಸದಾಶಿವನಗರದ ನಿವಾಸದ ಬಳಿ ಮಾತನಾಡುತ್ತಾ, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಪ್ರಾರಂಭವಾಗಿದೆ. ಅವರು ನಮ್ಮ ಮೈತ್ರಿ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬೇಡ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾವು ಅವರ ಸುದ್ದಿಗೆ ಹೋಗಿಲ್ಲ. ಈ ಹಿಂದೆ ಹಿರಿಯರಾದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಏಕಾಂಗಿಯಾಗಿ ಹೋರಾಡುತ್ತೇವೆ ಎಂದಿದ್ದರು. ಹಾಗೆಂದಿದ್ದ ಅವರ ಮಾತು, ಅವರ ಸಿದ್ಧಾಂತ ಈಗ ಎಲ್ಲಿ ಹೋಯಿತು? ದೇವೇಗೌಡರು ಹಾಗೂ ಕುಮಾರಸ್ವಾಮಿ ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು, ನಿಲುವುಗಳನ್ನು ಮಾಧ್ಯಮದವರು ಕೇಳಬೇಕು ಎಂದು ಟಾಂಗ್ ನೀಡಿದರು.
ಜೆಡಿಎಸ್ ಬಿಜೆಪಿ ಮೈತ್ರಿಗೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಅವರ ರಾಜಕೀಯ ನಿಲುವುಗಳ ಬಗ್ಗೆ ಯಾವ ನಾಯಕರು ಪ್ರತಿಕ್ರಿಯೆ ನೀಡಬೇಕೋ ಅವರು ನೀಡುತ್ತಾರೆ. ಅವರ ರಾಜಕೀಯ ಅಸ್ತಿತ್ವಕ್ಕಾಗಿ ಅವರು ತೀರ್ಮಾನ ಮಾಡುತ್ತಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು. 2018 ರಲ್ಲಿ ಮೈತ್ರಿ ಮಾಡಿಕೊಳ್ಳುವಾಗ ರೊಟ್ಟಿ ಹಳಸಿರಲಿಲ್ಲವೇ?. ಈಗ ಕಾಂಗ್ರೆಸ್ನವರು ಮಾತನಾಡುತ್ತಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆಗೆ, ಅವರ ಬಗ್ಗೆ ಮೊದಲ ದಿನದಿಂದಲೂ ನಮಗೆ ಗೊತ್ತು. ಒಂದೊಂದು ದಿನ ಒಂದೊಂದು ಮಾತನಾಡುತ್ತಿದ್ದಾರೆ?. ಅವರು ಮಾತನಾಡುತ್ತಲೇ ಇರಲಿ. ನಾನು ಕೇಳಿದ ಪ್ರಶ್ನೆಗಳಿಗೆ ಮೊದಲು ಅವರ ಬಳಿ ಉತ್ತರ ಕೇಳಿ ಎಂದರು.
ಮೈತ್ರಿ ವಿಚಾರ ಪ್ರಾರಂಭಿಕ ಹಂತದಲ್ಲಿದೆ: ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಎಲ್ಲ ಪ್ರಾರಂಭಿಕ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಇನ್ನೂ ಸೀಟ್ ಹಂಚಿಕೆ ಬಗ್ಗೆ ಯಾವುದೇ ಚರ್ಚೆಗಳು ಆಗಿಲ್ಲ. ಮೈತ್ರಿ ಯಾರಿಗೂ ಅನಿವಾರ್ಯ ಇಲ್ಲ, ಬಿಜೆಪಿಗೂ ಅನಿವಾರ್ಯ ಇಲ್ಲ, ನಮಗೂ ಅನಿವಾರ್ಯತೆ ಇಲ್ಲ. ಇಲ್ಲಿ ಕೊಟ್ಟು ತೆಗೆದುಕೊಳ್ಳುವುದು ಅಲ್ಲ, ವಿಶ್ವಾಸ ಗೌರವ ಮುಖ್ಯ. ಗೌರವ, ವಿಶ್ವಾಸವನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಈಗಿನ ಬೆಳವಣಿಗೆ ಪ್ರಾಥಮಿಕ ಹಂತದಲ್ಲಿರುವುದು ಅಷ್ಟೇ. ನಾಳೆ ಕಾರ್ಯಕರ್ತರ ಸಭೆ ಮಾಡಲು ದೇವೇಗೌಡರು ಮೊದಲೇ ಹೇಳಿದ್ದರು. ಕಾರ್ಯಕರ್ತರ ಅಭಿಪ್ರಾಯ ಕೇಳಬೇಕಲ್ವಾ?. ಎಲ್ಲದಕ್ಕೂ ಉತ್ತರ ಕೊಡುವ ಕಾಲ ದೂರ ಇದೆ ಎಂಬ ಮಾತನಾಡಿದ್ದಾರೆ ಕುಮಾರಸ್ವಾಮಿ.
ಇದನ್ನೂ ಓದಿ: ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡರೇ ತಪ್ಪೇನಿದೆ: ಸಂಸದ ರಮೇಶ ಜಿಗಜಿಣಗಿ