ಬೆಂಗಳೂರು: ನೀರು ಬಿಡದೆ ಸುಪ್ರೀಂ ಕೋರ್ಟ್‌ಗೆ ಹೋದರೆ, ಕೋರ್ಟ್ ನಮ್ಮನ್ನು ಪ್ರಶ್ನೆ ಮಾಡುತ್ತದೆ. ಆದೇಶ ಪಾಲಿಸಿದ್ದೀರಾ? ಎಂದು ಕೇಳಿದರೆ ನಾವೇನು ಉತ್ತರ ನೀಡುವುದು? ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದಲ್ಲಿ ಸೋಮವಾರ ಮಾತನಾಡಿದ ಅವರು, ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸೂಚನೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಈಗ ನಮಗೆ ಉಳಿದಿರುವುದು ಒಂದೇ ಮಾರ್ಗ. ನಾವು ಸುಪ್ರೀಂ ಕೋರ್ಟ್‌ಗೆ ಹೋಗಬೇಕು. ವಾಸ್ತವಾಂಶ ತಿಳಿಸಬೇಕಿದೆ. ನಮ್ಮ ಒಳಹರಿವು ಸಾಕಾಗುತ್ತಿಲ್ಲ. ಸಂಸದರೆಲ್ಲ ರಾಜ್ಯದ ಹಿತಕ್ಕೆ ಬದ್ಧ ಎಂದು ಹೇಳಿದ್ದಾರೆ. ನಾನು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇನೆ. ಅವರೂ ಸಹ ಕೇಂದ್ರ ಸಚಿವರನ್ನು ಭೇಟಿ ಮಾಡುವುದಕ್ಕೆ ಪ್ರಯತ್ನಿಸಿದ್ದಾರೆ" ಎಂದರು.
"ಈ ಬಗ್ಗೆ ಸಿಎಂ ಜತೆಗೂ ಮಾತನಾಡಿದ್ದೇನೆ. ನಾನು ಮಂಗಳವಾರ (ಇಂದು) ಅಥವಾ ನಾಳೆ (ಬುಧವಾರ) ದೆಹಲಿಗೆ ಹೋಗಿ ಸಂಸದರನ್ನು ಭೇಟಿ ಮಾಡಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇನೆ. ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕುತ್ತೇವೆ. ನೀರು ಬಿಡುವ ವಿಚಾರವಾಗಿ ನಮ್ಮ ಕಾನೂನು ತಜ್ಞರು ಸಲಹೆ ನೀಡಿದ್ದಾರೆ. 5 ಸಾವಿರ ಕ್ಯೂಸೆಕ್ ನೀರು ಬಿಟ್ಟರೂ ಅಲ್ಲಿಗೆ ಹೋಗುವುದು 2 ಸಾವಿರ ಕ್ಯೂಸೆಕ್. ನಾವು ಜಾಸ್ತಿ ನೀರನ್ನು ಬಿಟ್ಟಿಲ್ಲ. ನಮ್ಮ ರಾಜ್ಯವನ್ನು ಕಾಪಾಡಬೇಕು. ನೀವು ಎರಡು ರಾಜ್ಯಕ್ಕೆ ಬಂದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ" ಎಂದು ಕೋರ್ಟ್‌ಗೆ ಮನವಿ ಮಾಡುತ್ತೇವೆ" ಎಂದು ತಿಳಿಸಿದರು.
"ಸಂಸದರ ಮೂಲಕ ಪ್ರಧಾನಿ ಭೇಟಿಗೆ ನಿರ್ಧರಿಸಿದ್ದೇವೆ. ಎರಡು ಬಾರಿ ಸಮಯ ಕೇಳಿದ್ದೇವೆ. ಬೊಮ್ಮಾಯಿಯವರು ಈ ವಿಚಾರ ಸುಪ್ರೀಂ ಕೋರ್ಟ್ನಲ್ಲಿದೆ ಎನ್ನುತ್ತಾರೆ. ಸಂಕಷ್ಟ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತೀರ್ಮಾನ ಆಗಿಲ್ಲ. ಮಳೆ ಇಲ್ಲದ ಸಂದರ್ಭದಲ್ಲಿ ಯಾವ ಹಂತದಲ್ಲಿ ನೀರು ಬಿಡಬೇಕೆಂದು ಮಾರ್ಗದರ್ಶನ ಮಾಡಿ ಎಂದು ಕೇಳುತ್ತೇವೆ" ಎಂದರು.
ನೀರು ಬಿಡುವುದು ಬೇಡ ಎಂಬ ಬೊಮ್ಮಾಯಿಯವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಖಂಡಿತಾ ಅವರ ಅಭಿಪ್ರಾಯ ಸರಿಯಿದೆ. ಆದರೆ ಸುಪ್ರೀಂ ಕೋರ್ಟ್, ನೀವು ಆದೇಶ ಪಾಲಿಸದೇ ಇಲ್ಲಿ ಬಂದಿದ್ದೀರಾ ಎಂದು ಕೇಳಿದ್ರೆ ಏನು ಮಾಡ್ತೀರಾ?. ಕೆಳಗಿನ ನ್ಯಾಯಾಲಯಕ್ಕೆ ಗೌರವ ಕೊಡದೆ ಬಂದಿದ್ದೀರಾ ಎಂದು ನಮ್ಮ ಅರ್ಜಿ ಬಿಸಾಕಿದರೆ ಏನು ಮಾಡುವುದು?. ಆ ಆಯ್ಕೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಅಲ್ಲವೇ?" ಎಂದು ಕೇಳಿದರು.
"ಎಲ್ಲರೂ ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂಬ ದೇವೇಗೌಡರ ಸಲಹೆ ವಿಚಾರವಾಗಿ ಮಾತನಾಡುತ್ತಾ, "ಖಂಡಿತ ಅವರು ಹೇಳುವುದರಲ್ಲಿ ಅರ್ಥವಿದೆ. ಸರ್ಕಾರದ ಒಳಗೆ ಬಗೆಹರಿದರೆ ಪರಿಹಾರ ಸಿಗುತ್ತದೆ. ಮೇಕೆದಾಟು ಇದಕ್ಕೆ ಪರಿಹಾರ. ತಾಂತ್ರಿಕವಾಗಿ ಅವರಿಗೇನು ಅರ್ಥ ಆಗುತ್ತದೆ?. ಅದಕ್ಕೆ ಪ್ರಾಧಿಕಾರದ ಮುಂದೆ ಹೋಗಿ ಎಂದು ಕೋರ್ಟ್ ಹೇಳಿದ್ದು. ಕೂಡಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ" ಎಂದರು.
ಇದನ್ನೂ ಓದಿ: ಪ್ರಾಧಿಕಾರದ ಆದೇಶಕ್ಕೆ ರೈತರ ಕಪ್ಪು ಬಾವುಟ ಪ್ರದರ್ಶನ.. ಕಾವೇರಿ ನದಿಗಿಳಿದು ರೈತರ ಪ್ರತಿಭಟನೆ