ಬೆಂಗಳೂರು: ಬಿಬಿಎಂಪಿ ಚುನಾವಣೆಯನ್ನು ನಾವು ಮಾಡಲೇಬೇಕು, ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು. ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋರ್ಟ್ ನಿರ್ದೇಶನ ಪಾಲನೆ ಮಾಡಬೇಕು. ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಮಾಡುತ್ತೇವೆ. ವಾರ್ಡ್ ಎಷ್ಟ್ರಿರಲಿದೆ ಎಂದು ಈಗಲೇ ಹೇಳಲು ಬರಲ್ಲ. ಜನರ ಕೈಗೆ ಅಧಿಕಾರ ನೀಡಬೇಕು ಎಂಬುದು ನಮ್ಮ ಉದ್ದೇಶ. ನಿಗಮ ಮಂಡಳಿ ನೇಮಕಕ್ಕೆ ಟೈಮ್ ಲೈನ್ ನೀಡಿದ್ದೇವೆ. ಶಿಫಾರಸು ಮಾಡಿ ಎಂದು ಕಾರ್ಯಕರಿತರಿಗೆ ಸೂಚನೆ ನೀಡಿದ್ದೇನೆ ಎಂದರು.
ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು. ಕಾರ್ಯಕರ್ತರು ಇದ್ರೆನೆ ಪಕ್ಷ ಇರುತ್ತದೆ. ಶಾಸಕರು ಮತ್ತು ಅಧ್ಯಕ್ಷರಿಗೆ ಹೆಸರು ಶಿಫಾರಸು ಮಾಡಲು ಹೇಳಿದ್ದೇವೆ. ನಿಗದಿತ ಸಮಯದೊಳಗೆ ನಿಗಮ ಮಂಡಳಿ ಭರ್ತಿ ಮಾಡುತ್ತೇವೆ ಎಂದರು. ಬಿಜೆಪಿ ಸರ್ಕಾರದಲ್ಲಿ ನೇಮಕವಾದ ನಿಗಮ ಮಂಡಳಿಗಳನ್ನ ಮುಂದುವರಿಸುವ ವಿಚಾರವಾಗಿ ಸದ್ಯಕ್ಕೆ ಇಷ್ಟು ಮಾತನಾಡಿದ್ದೇನೆ ಸಾಕು ಎಂದರು.
ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಕೂಡ ಮಾಡುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಅಕ್ಕಿ ವಿಚಾರದಲ್ಲಿ ಸಿಎಂ ಹಾಗೂ ಆಹಾರ ಸಚಿವರು ಮಾತನಾಡುತ್ತಿದ್ದಾರೆ ಎಂದರು. ಗೃಹ ಲಕ್ಷ್ಮಿ ವಿಳಂಬ ವಿಚಾರವಾಗಿ ಮಾತನಾಡಿ ಯಾವಾಗ ಜಾರಿಯಾಗುತ್ತದೆ ಎಂಬುದಕ್ಕೆ ನಾಡಿದ್ದು ಸಂಪುಟ ಸಭೆ ಇದೆ. ಮಹಿಳಾ ಮತ್ತು ಮಕ್ಕಳ ಸಚಿವರು ಮಾಹಿತಿ ನೀಡಿದ್ದಾರೆ ಎಂದು ವಿವರಿಸಿದರು.
ಮುಖಂಡರ ಭೇಟಿ, ಸಮಾಲೋಚನೆ: ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಅವರ ಸದಾಶಿವನಗರ ನಿವಾಸದಲ್ಲಿ ಮಾಜಿ ಸಂಸದ ವಿಶ್ವಾನಾಥನ್, ಶಾಸಕರಾದ ಎ.ಬಿ. ಪಾಟೀಲ್, ಬಸನಗೌಡ ದದ್ದಲ್ ಹಾಗೂ ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಭೇಟಿಯಾಗಿ ಸಮಾಲೋಚಿಸಿದರು. ಭೇಟಿಯಾದ ನಾಯಕರು ಡಿಸಿಎಂಗೆ ಅಭಿನಂದನೆ ಸಲ್ಲಿಸಿ, ಬೊಕ್ಕೆ ನೀಡಿ ಸತ್ಕರಿಸಿದರು. ಪ್ರಸಕ್ತ ರಾಜಕೀಯ ಹಾಗೂ ಮುಂಬರುವ ದಿನಗಳಲ್ಲಿ ಅಧಿಕಾರ ಹಂಚಿಕೆ ಸಂದರ್ಭ ತಮಗೂ ಅವಕಾಶ ನೀಡುವಂತೆ ಇಬ್ಬರೂ ಶಾಸಕರು ಕೋರಿದರು. ಉಳಿದಂತೆ ವಿಶ್ವನಾಥ ಸೌಹಾರ್ದ ಭೇಟಿ ಮಾಡಿದ್ದರು. ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ತಮ್ಮ ಬೇಡಿಕೆ ಪಟ್ಟಿಯನ್ನು ಇದೇ ವೇಳೆ ಡಿಸಿಎಂಗೆ ಸಲ್ಲಿಸಿದರು.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ಸಿದ್ಧತೆ: ಗುಂಪುಗಾರಿಕೆ ಸಹಿಸುವುದಿಲ್ಲ, ನಿಷ್ಠೆಯಿಂದ ಪಕ್ಷದ ಕೆಲಸ ಮಾಡಿ ಎಂದ ಹೆಚ್ಡಿಕೆ
ಜನಪ್ರತಿನಿಧಿಗಳ ಜತೆ ಡಿಕೆಶಿ ಮಹತ್ವದ ಸಭೆ: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿಬಿಎಂಪಿ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಮುಖಂಡರ ಜತೆ ಇತ್ತೀಚೆಗೆ ಸಂಜೆ ಸಭೆ ನಡೆಸಿದ್ದರು. ಬೆಂಗಳೂರಿನ ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ಸಭೆ ನಡೆದಿತ್ತು. ಸಭೆೆಯಲ್ಲಿ ಮಾತನಾಡಿದ ಡಿಸಿಎಂ ವಿಧಾನಸಭೆ ಚುನಾವಣೆ ಬೆನ್ನಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಬಿಬಿಎಂಪಿ ಚುನಾವಣೆ ಸಹ ಘೋಷಣೆಯಾಗುವ ಸಾಧ್ಯತೆ ಇದೆ. ಹಾಗಾಗಿ ಕಾಂಗ್ರೆಸ್ ಪರವಾಗಿ ಬಿಬಿಎಂಪಿಯನ್ನು ಕೈವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಜನಪ್ರತಿನಿಧಿಗಳಿಗೆ ಸೂಚನೆ ನೀಡಿದ್ದರು.
ಇದನ್ನೂ ಓದಿ: ಮಹಾನಗರ ವ್ಯಾಪ್ತಿಯ ಕಾಂಗ್ರೆಸ್ ಜನಪ್ರತಿನಿಧಿಗಳ ಜತೆ ಡಿಕೆಶಿ ಮಹತ್ವದ ಸಭೆ