ಬೆಂಗಳೂರು: ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆ ತಮ್ಮ ತಮ್ಮ ಊರಿಗೆ ಪ್ರಯಾಣ ಬೆಳೆಸಿರುವ ಬೇರೆ ಬೇರೆ ರಾಜ್ಯದ ನೂರಾರು ವಲಸೆ ಕಾರ್ಮಿಕರನ್ನು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಇಂದು ಬೀಳ್ಕೊಟ್ಟರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ, ಈ ದಿನ 5 ಶ್ರಮಿಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಏಳೂವರೆ ಸಾವಿರ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. 2 ದಿನಗಳಿಗೆ ಬೇಕಾಗುವ ಆಹಾರ ಪೊಟ್ಟಣಗಳನ್ನು ವಿತರಿಸಿ, ಪ್ರಯಾಣಕ್ಕೆ ಶುಭ ಕೋರಲು ಬಂದಿರುವುದಾಗಿ ತಿಳಿಸಿದರು.
ಲಾಕ್‌ಡೌನ್ ಸಡಿಲಿಕೆ ನಂತರ ಕುಟುಂಬ ಸದಸ್ಯರನ್ನು ಭೇಟಿಯಾಗಲು ತಮ್ಮ ಊರಿಗೆ ತೆರಳಲು ಬಯಸಿರುವ ಕಾರ್ಮಿಕರಿಗೆ ರೈಲು ವ್ಯವಸ್ಥೆ ಮಾಡಲಾಗಿದೆ. ಮೇ. 31ರವರೆಗೆ ಪ್ರತಿ ದಿನ 10 ರೈಲುಗಳು ರಾಜ್ಯದಿಂದ ಹೊರಡಲಿದ್ದು, ಒಟ್ಟು 126 ಶ್ರಮಿಕ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕಾರ್ಮಿಕರು ಉಚಿತವಾಗಿ ಪ್ರಯಾಣ ಬೆಳೆಸಲಿದ್ದಾರೆ ಎಂದು ವಿವರಿಸಿದರು.