ಬೆಂಗಳೂರು: ನೆರೆಯ ಕೋಲಾರ ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಭಾರತ್ ಬಯೋಟೆಕ್, ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ ಸ್ಥಾಪನೆಯಾಗುತ್ತಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಓದಿ: ಪಿಎಂ ಕಿಸಾನ್ ಯೋಜನೆಯಡಿ ಹಣಕಾಸು ನೆರವು: ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ವೈ ಭಾಗಿ
ಬೆಂಗಳೂರಿನಲ್ಲಿ ಮಾತನಾಡಿ, ರಾಜಧಾನಿಗೆ ಹತ್ತಿರದಲ್ಲೇ ಇರುವ ಮಾಲೂರಿನಲ್ಲಿ ಕೋವ್ಯಾಕ್ಸಿನ್ ಘಟಕ ಬರುತ್ತಿದೆ. ಅಲ್ಲಿಗೆ ರೈಲು ಸೇರಿದಂತೆ ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ಅಲ್ಲಿಯೂ ಲಸಿಕೆ ತಯಾರಾಗಲಿದೆ. ಈಗಾಗಲೇ ಸರ್ಕಾರ ಎಲ್ಲ ಒಪ್ಪಿಗೆ ನೀಡಿದೆ. ಆಡಳಿತಾತ್ಮಕ ಕೆಲಸಗಳನ್ನು ಕಂಪನಿ ಪೂರ್ಣ ಮಾಡುತ್ತಿದ್ದು, ಸಿವಿಲ್ ಕಾಮಗಾರಿಗಳು ಶುರುವಾಗಿವೆ. ಅವು ತ್ವರಿತವಾಗಿ ಮುಗಿದು ಆದಷ್ಟು ಬೇಗ ಲಸಿಕೆ ತಯಾರಿಕೆ ಆರಂಭವಾಗುತ್ತದೆ ಎಂದರು.
ಈಗಾಗಲೇ ಕೋವಿಶೀಲ್ಡ್ ತಯಾರಿಸುವ ಸೀರಂ ಮಾತ್ರವಲ್ಲದೇ, ಯಾವುದೇ ಲಸಿಕೆ ತಯಾರಿಕೆ ಕಂಪನಿ ರಾಜ್ಯಕ್ಕೆ ಬಂದು ಘಟಕ ಸ್ಥಾಪಿಸಲು ಮುಂದಾದರೆ ಅಗತ್ಯವಾದ ಎಲ್ಲ ಸಹಕಾರ ನೀಡಲಾಗುವುದು. ಅತ್ಯಂತ ಕ್ಷಿಪ್ರಗತಿಯಲ್ಲಿ ಎಲ್ಲ ಅನುಮತಿಗಳನ್ನು ನೀಡಲಾಗುವುದು ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
100 ಹಾಸಿಗೆಗಳ ಆಸ್ಪತ್ರೆ:
ಎರಡನೇ ಅಲೆ ಹಾಗೂ ಸಂಭವನೀಯ ಮೂರನೇ ಅಲೆ ಎದುರಿಸಲು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯುತ್ತಮ ವೈದ್ಯಕೀಯ ಮೂಲಸೌಕರ್ಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಕನಿಷ್ಠ 100 ಹಾಸಿಗೆಗಳ ಆಸ್ಪತ್ರೆ ಇರಲೇಬೇಕು. ಅದರಲ್ಲಿ ಆಕ್ಸಿಜನ್ & ಐಸಿಯು ಬೆಡ್ʼಗಳೂ ಇರಬೇಕು. ಈ ಬಗ್ಗೆ ಕ್ರಮ ವಹಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
40 ಕೋಟಿ ಡೋಸ್ ಉತ್ಪಾದನೆ:
ನೀತಿ ಆಯೋಗ ಈಗಾಗಲೇ ತಿಳಿಸಿರುವಂತೆ ಆಗಸ್ಟ್ ತಿಂಗಳಲ್ಲಿ 40 ಕೋಟಿ ಡೋಸ್ ಲಸಿಕೆ ದೇಶದಲ್ಲಿ ಉತ್ಪಾದನೆ ಆಗಲಿದೆ. ಇದು ಆಶಾದಾಯಕ ಬೆಳವಣಿಗೆಯಾಗಿದ್ದು, ಜೂನ್-ಜುಲೈ ತಿಂಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ತಯಾರಾಗಲಿದೆ. ಇದುವರೆಗೂ ದೇಶದಲ್ಲಿ 19 ಕೋಟಿ ಡೋಸ್ ವ್ಯಾಕ್ಸಿನ್ ಕೊಡಲಾಗಿದೆ. ಜತೆಗೆ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ಈವರೆಗೆ ಎಲ್ಲ ಮೂಲಗಳಿಂದ ಬಂದಿರುವ ನೆರವಿನ ಪ್ರಮಾಣವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದರು.
ಕೇಂದ್ರವು ಲಸಿಕೆ ತಯಾರಿಕೆ ಕಂಪನಿಗಳಿಗೆ ಸಾಕಷ್ಟು ಉತ್ತೇಜನ ಕೊಡುತ್ತಿದೆ. ಜಾಗತಿಕ ಮಟ್ಟದಲ್ಲಿ ಲಸಿಕೆಗಳ ಮೇಲಿರುವ ಪೇಟೆಂಗ್ ವಿನಾಯಿತಿ ಬಗ್ಗೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ದೇಶಗಳ ನಾಯಕರ ಜತೆ ಈಗಾಗಲೇ ಯಶಸ್ವಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಇನ್ನಷ್ಟು ಲಸಿಕೆ ತಯಾರಿಕೆ ಘಟಕಗಳು ರಾಜ್ಯಕ್ಕೆ ಬರಲಿವೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಸಿಎಸ್ಆರ್ ನೆರವು:
ಕಾರ್ಪೋರೇಟ್ ವಲಯದಿಂದ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಸಿಎಸ್ಆರ್ ನೆರವು ಬರುತ್ತಿದೆ. ಹಣದ ರೂಪದಲ್ಲಿ & ಸಾಮಗ್ರಿ ರೂಪದಲ್ಲಿ ನೆರವು ಹರಿದುಬರುತ್ತಿದೆ. ಜತೆಗೆ, ಮುಖ್ಯಮಂತ್ರಿ ಪರಿಹಾರ ನಿಧಿಗೂ ಹಣ ಸಂದಾಯವಾಗುತ್ತಿದ್ದು, ಕೇಂದ್ರ ಸರ್ಕಾರದಿಂದಲೂ ಸಾಕಷ್ಟು ನೆರವು ಸಿಗುತ್ತಿದೆ. ಈಗಾಗಲೇ ಈ ಬಗ್ಗೆ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ ಎಂದ ಅವರು, ಅಂತಾರಾಷ್ಟ್ರೀಯ ಮಟ್ಟದಿಂದಲೂ ರಾಜ್ಯಕ್ಕೆ ಸಾಕಷ್ಟು ನೆರವು ಬಂದಿದೆ. ಈ ವಿಭಾಗದಲ್ಲಿ ಹಿರಿಯ ಅಧಿಕಾರಿಗಳಾದ ಸೆಲ್ವಕುಮಾರ್ ಹಾಗೂ ಸಿಎಸ್ಆರ್ ಉಸ್ತುವಾರಿ ಅಧಿಕಾರಿ ಉಮಾ ಮಹಾದೇವನ್ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.