ಬೆಂಗಳೂರು: ರೈತರಿಗೆ ಹಾಗೂ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಬೆಂಗಳೂರಿನ ಸುತ್ತ - ಮುತ್ತ ಇನ್ನು 12 ಮಾರ್ಕೆಟ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಡಿಸಿಎಂ ಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನ ವಸ್ತುಗಳ ಸರಬರಾಜು ಕುರಿತಂತೆ ವಿಕಾಸಸೌಧದಲ್ಲಿ ಇಂದು ಸಂಬಂಧಪಟ್ಟ ಸಚಿವರ ಜೊತೆ ಸಭೆ ನಡೆಸಿದ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಾರ್ಕೆಟ್ ಜಾಗಕ್ಕಾಗಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಎಪಿಎಂಸಿಯ ಎಲ್ಲ ಮಾರ್ಕೆಟ್ ಗಳ ಸಮಸ್ಯೆ ನಿವಾರಣೆಗೆ ಸಹಕಾರ ಇಲಾಖೆ ಕ್ರಮ ಕೈಗೊಂಡಿದೆ. ಕೃಷಿ ಸಂಸ್ಕರಣಾ ಘಟಕಗಳ ಸಿಬ್ಬಂದಿಗೆ ಪಾಸ್ ವಿತರಣೆ ಮಾಡಲಾಗುತ್ತದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ದಾರರಿಗೆ ಪಡಿತರ ವಿತರಣೆ ಮುಕ್ತಾಯ ಹಂತದಲ್ಲಿದೆ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ವಿತರಣೆ ಮಾಡಲಾಗುವುದು. ಸುಮಾರು 2.5 ಲಕ್ಷ ಅರ್ಜಿದಾರರಿಗೆ ಪಡಿತರ ವಿತರಣೆ ಮಾಡಲಾಗುತ್ತದೆ ಎಂದರು.
ತೋಟಗಾರಿಕೆ ಬೆಳೆಗಳ ಸಾಗಣೆ ಮತ್ತು ಮಾರಾಟಕ್ಕೆ ಸೂಕ್ತ ಕ್ರಮ ವಹಿಸಲಾಗಿದೆ ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗುವಂತೆ ವೈನ್ ತಯಾರಿಕಾ ಘಟಕಗಳು, ಡಿಸ್ಟಿಲರಿಗಳ ಆರಂಭಕ್ಕೆ ಕ್ರಮಕೈಗೊಳ್ಳಲಾಗಿದೆ. ಕೃಷಿ ಉತ್ಪನ್ನಗಳು, ತೋಟಗಾರಿಕೆ ಬೆಳೆಗಳು, ರೇಷ್ಮೆ ಗೂಡು ಧಾರಣೆಯಲ್ಲಿ ಇಳಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಹಣ್ಣು, ತರಕಾರಿ ಪೂರೈಕೆಗೆ ಕ್ರಮ ವಹಿಸಿದ್ದು, ಬೆಂಗಳೂರು ನಗರದ ಗ್ರಾಹಕರಿಗೆ ಅನುಕೂಲವಾಗುವಂತೆ 320 ಮೊಬೈಲ್ ವಾಹನಗಳ ಮೂಲಕ ಹಣ್ಣು, ತರಕಾರಿ ಪೂರೈಕೆ ಮಾಡಲಾಗುವುದು ಎಂದು ಹೇಳಿದರು.
ದಿನಸಿ ಅಂಗಡಿಗಳಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ಈ ಸಂಬಂಧ ಅಧಿಕಾರಿಗಳು ದಾಳಿ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.