ಬೆಂಗಳೂರು: ಹಿಂದಿನ ಬಜೆಟ್‌ನಲ್ಲಿ ಹಂಚಿಕೆಯಾಗಿರುವ ನಿಧಿ ಬಳಸಿಕೊಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎದುರು ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಇದಕ್ಕೆ ಹೊಸದಾಗಿ ಹಣ ಪಡೆಯುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಅಗತ್ಯದ ಬಗ್ಗೆ ಪ್ರಶ್ನಿಸಿದ ಸುದ್ದಿಗಾರರಿಗೆ ಉತ್ತರಿಸಿದ ಡಾ.ಅಶ್ವತ್ಥನಾರಾಯಣ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ 3 ವರ್ಷ ಆಗಿದೆ. ಪ್ರತಿಮೆ ನಿರ್ಮಾಣಕ್ಕೂ ಈ ಹಿಂದೆಯೇ ಹಣ ಹಂಚಿಕೆ ಆಗಿದೆ. ಅದನ್ನು ಈಗ ಬಳಸಿಕೊಳ್ಳಲಾಗುತ್ತಿದೆಯೇ ಹೊರತು, ಹೊಸದಾಗಿ ಸರ್ಕಾರದ ಬೊಕ್ಕಸದಿಂದ ಹಣ ಪಡೆಯುತ್ತಿಲ್ಲ ಎಂದರು.
ಪ್ರತಿಮೆ ನಿರ್ಮಾಣದ ಪರಿಕಲ್ಪನೆ ಸಿದ್ಧವಾಗಿದ್ದು, ಏಜೆನ್ಸಿಯನ್ನೂ ಗುರುತಿಸಲಾಗಿದೆ. ಈಗ ಕೆಲಸ ಆರಂಭವಾದರೂ ಅದು ಪೂರ್ಣಗೊಳ್ಳಲು ಸಮಯ ಹಿಡಿಯುತ್ತದೆ. ಜೂನ್ 27ರಂದು ಕೆಂಪೇಗೌಡರ 511ನೇ ಜಯಂತಿ ಇದೆ. ಹೀಗಾಗಿ ಅಂದು ಶಂಕು ಸ್ಥಾಪನೆ ನೆರವೇರಿಸಲು ನಿರ್ಧರಿಸಲಾಗಿದೆ. ಕೆಂಪೇಗೌಡರ ಗೌರವಾರ್ಥ ಅವರ ಸ್ಮಾರಕ ನಿರ್ಮಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಪರಿಸ್ಥಿತಿ ಉತ್ತಮವಾಗಿ ನಿಭಾಯಿಸಿದ್ದೇವೆ:
ಕೋವಿಡ್ ನಿವರ್ಹಣೆಗೆಂದೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಸಂಗ್ರಹವಾಗಿರುವ ದೇಣಿಗೆಯನ್ನು ಅದೇ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. ವೈರಸ್ ಬಹಳ ಕಾಲ ಇರುವುದರಿಂದ ಅದರ ನಿರ್ವಹಣೆಗೆ ಹೆಚ್ಚಿನ ಹಣದ ಅಗತ್ಯ ಇರುತ್ತದೆ. ವಿಪತ್ತು ನಿರ್ವಹಣೆಗೆ ಅದನ್ನು ಬಳಸಿಕೊಂಡು ಪರಿಸ್ಥಿತಿ ನಿಭಾಯಿಸಲಾಗುವುದು ಎಂದು ತಿಳಿಸಿದರು.
ಕೋವಿಡ್ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಉತ್ತಮವಾಗಿ ನಿಭಾಯಿಸಿದೆ. ವಲಸೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿದೆ. ಸಂತ್ರಸ್ತರಿಗೆ ಪಡಿತರ, ಆಹಾರ ಒದಗಿಸಿ ಆಶ್ರಯ ಕಲ್ಪಿಸಲಾಗಿದೆ. ಆರೋಗ್ಯದ ಕಾಳಜಿ ವಹಿಸಲಾಗಿದೆ. ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬೇರೆ ರಾಜ್ಯಗಳು ಸಹ ತಮ್ಮ ಕಾರ್ಮಿಕರ ನೆರವಿಗೆ ಬರಲಿಲ್ಲ. ಅಂಥ ಸಂದರ್ಭದಲ್ಲಿ ಅವರ ಕೈ ಹಿಡಿದಿದ್ದು ರಾಜ್ಯ ಸರ್ಕಾರ ಎಂದರು.
ರಾಜ್ಯಸಭೆಗೆ ತಳಮಟ್ಟದ ಕಾರ್ಯಕರ್ತರು:
ರಾಜ್ಯಸಭೆ ಚುನಾವಣೆಗೆ ತಳಮಟ್ಟದ ಕಾರ್ಯಕರ್ತರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ರಾಜಕೀಯವಾಗಿ ಉತ್ತಮ ಸಂದೇಶ ರವಾನಿಸಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.
ಅಶೋಕ್ ಗಸ್ತಿ ಹಾಗೂ ಈರಣ್ಣ ಕಡಾಡಿ ಅವರು ಪಕ್ಷದಿಂದ ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವುದು ಬಿಜೆಪಿಯ ಎಲ್ಲ ಕಾರ್ಯಕರ್ತರಿಗೆ ಸಂದ ಜಯ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರಿಗೆ ಸೂಕ್ತ ಸ್ಥಾನಮಾನ ದೊರೆಯುತ್ತದೆ ಎಂಬುದಕ್ಕೆ ಇದೇ ಉದಾಹರಣೆ ಎಂದರು.
ರಾಜಕೀಯದಲ್ಲಿ ಸಾಕಷ್ಟು ಸವಾಲುಗಳಿರುತ್ತವೆ. ಅದರ ನಡುವೆ ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಮುಖ್ಯ. ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕ ನಮ್ಮ ಪಕ್ಷ ರಾಜಕೀಯದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ಸಾಧಾರಾಣ ಕಾರ್ಯಕರ್ತರು ಈ ಮಟ್ಟಕ್ಕೆ ಬೆಳೆಯಲು ಸಾಧ್ಯ ಇದೆ ಎಂಬ ಸಂದೇಶ ನೀಡುವ ಮೂಲಕ ಬಿಜೆಪಿ ಎಲ್ಲರಿಗೂ ಸಲ್ಲುವಂಥ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇಂಥ ನಿರ್ಣಯ ಕೈಗೊಂಡ ಪಕ್ಷದ ಹಿರಿಯರು, ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.