ಬೆಂಗಳೂರು : ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ವರ್ತಿಸಿದ ರೀತಿ ಇಡೀ ಭಾರತೀಯ ಸಂಸದೀಯ ವ್ಯವಸ್ಥೆ ಹಾಳು ಮಾಡುವ ರೀತಿಯಲ್ಲಿದೆ. ಕಾಂಗ್ರೆಸ್ ಕಲರ್ (ಬಣ್ಣ) ಏನೆಂಬುದು ಇಡೀ ಜಗತ್ತಿಗೆ ಜಗಜ್ಜಾಹೀರಾಯಿತು ಎಂದು ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಕಟುವಾಗಿ ಟೀಕಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಉಪ ಮುಖ್ಯಮಂತ್ರಿಗಳು, ಚಿಂತಕರ ಚಾವಡಿ, ದೊಡ್ಡವರ ಮನೆಯ ಘನತೆಯನ್ನು ಕಾಂಗ್ರೆಸ್ ಹಾಳು ಮಾಡಿದೆ. ಇದು ಅತ್ಯಂತ ಹೇಯ ಹಾಗೂ ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದಿದ್ದಾರೆ.
ಭಾರತ ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಮೊದಲ ಸರ್ಕಾರ ರಚಿಸಿದ ಪಕ್ಷ, ರಾಜ್ಯದಲ್ಲೂ ಮೊದಲು ಸರ್ಕಾರ ರಚಿಸಿದ ಪಕ್ಷ, ವಯಸ್ಸಿನಲ್ಲಿ ಶತಮಾನ ದಾಟಿದ ಪಕ್ಷವಾದ ಕಾಂಗ್ರೆಸ್ ಇವತ್ತು ಅದೇ ಪ್ರಜಾಪ್ರಭುತ್ವದ ಸಾಕ್ಷಿಯಾಗಿ ಪ್ರಜಾಪ್ರಭುತ್ವ ಹಾಗೂ ಸಂಸದೀಯ ಮೌಲ್ಯಗಳನ್ನು ನೆಲಸಮ ಮಾಡಿದೆ. ಇದು ಅತ್ಯಂತ ನೋವಿನ ಸಂಗತಿ ಎಂದು ಡಿಸಿಎಂ ತಿಳಿಸಿದ್ದಾರೆ.
ಕಾಂಗ್ರೆಸ್ ಪ್ರಜಾಪ್ರಭುತ್ವಪರ ಎಂದು ಕೊಚ್ಚಿಕೊಳ್ಳುತ್ತದೆ. ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಿದ್ದವರು. ಹಾಗಿದ್ದರೂ ಅವರು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ನೀಡಲಿಲ್ಲ. ಸಭಾಪತಿ ಅವರ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯಾಗದಂತೆಯೇ ಅವರು ಕುಮ್ಮಕ್ಕು ನೀಡಿದರು. ಇದು ಖಂಡಿತಾ ಸರಿಯಲ್ಲ ಎಂದು ಹೇಳಿದರು.
ಓದಿ...ಪರಿಷತ್ ದಾಂಧಲೆಯಲ್ಲಿ ಡಿಸಿಎಂಗಳು, ಹಿರಿಯ ಸಚಿವರು ಮೂಕ ಪ್ರೇಕ್ಷಕರು.. ಸದನಕ್ಕೂ ಮೊದಲೇ ಗುಂಪು ಸೇರಿದ್ಯಾಕೆ?
ಕಾಂಗ್ರೆಸ್ ಹೇಳಿ ಕೇಳಿ ಗೂಂಡಾ ಸಂಸ್ಕೃತಿಗೆ ಹೆಸರಾದ ಪಕ್ಷ. ಅನೇಕ ವರ್ಷಗಳಿಂದ ಇದನ್ನೇ ಮಾಡಿಕೊಂಡು ಬಂದಿದೆ. ವಿಧಾನ ಪರಿಷತ್ತಿನಲ್ಲೂ ಅದನ್ನೇ ಮಾಡಿದೆ. ಈಗಾಗಲೇ ಆ ಪಕ್ಷಕ್ಕೆ ಜನರು ತಕ್ಕಶಾಸ್ತಿ ಮಾಡಿದ್ದಾರೆ. ಅದರ ಪರಿಣಾಮವೇ ಭಾರತವು ಕಾಂಗ್ರೆಸ್ ಮುಕ್ತ ದೇಶವಾಗುತ್ತಿದೆ.
ಇದೀಗ ಕಾಂಗ್ರೆಸ್ ತನ್ನ ಭಂಡತನದಿಂದ ಆ ಕೆಲಸ ಇನ್ನಷ್ಟು ಬೇಗ ಆಗುವಂತೆ ತಾನೇ ನೋಡಿಕೊಳ್ಳುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. ಸಂಸದೀಯ ನಡವಳಿಕೆಯಲ್ಲಿ ಅತ್ಯಂತ ಕೆಟ್ಟ ಸಂಪ್ರದಾಯಗಳಿಗೆ ನಾಂದಿ ಹಾಡಿರುವ ಕಾಂಗ್ರೆಸ್ ಮುಂದೆ ಅದರ ಪರಿಣಾಮವನ್ನು ಎದುರಿಸಲಿದೆ ಎಂದಿರುವ ಡಾ.ಅಶ್ವತ್ಥ್ ನಾರಾಯಣ, ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.