ಬೆಂಗಳೂರು: ಬಿಜೆಪಿಯಲ್ಲೀಗ ಸಚಿವ ಸಂಪುಟ ವಿಸ್ತರಣೆ ಹಾಗೂ ಡಿಸಿಎಂ ಸ್ಥಾನದ ಬಗ್ಗೆಯೇ ಚರ್ಚೆಗಳು ಹೆಚ್ಚಾಗಿವೆ. ಡಿಸಿಎಂ ಹುದ್ದೆ ಸಂಬಂದಿಸಿದಂತೆ ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಡಿಸಿಎಂ ಅಶ್ವತ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ನಮ್ಮ ಪಕ್ಷ ಮತ್ತು ಸಿಎಂ ನಿರ್ಧಾರ ಮಾಡಿ ಡಿಸಿಎಂ ಸ್ಥಾನ ನೀಡಿದ್ದಾರೆ. ಯಾವುದೇ ತೀರ್ಮಾನವಾದರೂ ಅವರೇ ತೆಗೆದುಕೊಳ್ಳುತ್ತಾರೆ. ರೇಣುಕಾಚಾರ್ಯ ಅವರ ಅಭಿಪ್ರಾಯ ಹೇಳಿದ್ದಾರೆ, ಈ ರೀತಿಯ ಅಭಿಪ್ರಾಯವನ್ನು ಪಕ್ಷದೊಳಗೇ ವ್ಯಕ್ತಪಡಿಸುವುದು ಸೂಕ್ತ ಎಂದರು.
ಈ ರೀತಿಯ ಬಹಿರಂಗ ಹೇಳಿಕೆಯಿಂದ ಅವರು ಪಕ್ಷವನ್ನೇ ಪ್ರಶ್ನೆ ಮಾಡಿದಂತಾಗುತ್ತದೆ. ಬಹಿರಂಗವಾಗಿ ಹೇಳುವುದು ಸರಿಯಲ್ಲ, ನಾನು ಡಿಸಿಎಂ ಹುದ್ದೆ ನಿರ್ಮಾಣ ಮಾಡುವವನೂ ಅಲ್ಲ, ನಿರ್ಧಾರ ಮಾಡುವವನೂ ಅಲ್ಲ. ಯಾವ್ಯಾವಾಗ ಯಾರ್ಯಾರಿಗೆ ಹುದ್ದೆಗಳು ಸಲ್ಲಬೇಕೋ ಅದು ಸಲ್ಲುತ್ತದೆ ಎಂದು ಶಾಸಕ ರೇಣುಕಾಚಾರ್ಯಗೆ ತಿರುಗೇಟು ನೀಡಿದರು.