ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ರಾಜಧಾನಿ ಸೇರಿದಂತೆ ರಾಜ್ಯದೆಲ್ಲೆಡೆ ಕೊರೊನಾ ಸೋಂಕು ಮತ್ತೆ ಸ್ಫೋಟಗೊಳ್ಳುತ್ತಿದೆ. ಹೀಗಾಗಿ ಬೆಂಗಳೂರಲ್ಲಿ ಮತ್ತೆ ಸರ್ಕಾರದಿಂದ ಲಾಕ್ಡೌನ್ ಮಾಡುವ ಸಾಧ್ಯತೆ ಇದೆಯಾ ಗೊಂದಲಕ್ಕೆ ಡಿಸಿಎಂ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಕಾರಣಕ್ಕೂ ಲಾಕ್ಡೌನ್ ಇರುವುದಿಲ್ಲ ಎಂದಿದ್ದಾರೆ.
ಕೊರೊನಾ ವೈರಸ್ ನಮ್ಮ ಜೊತೆಯಲ್ಲೇ ಇರುತ್ತದೆ. ಕೋಟಿ ಕೋಟಿ ವೈರಸ್ಗಳ ಹಾಗೆ ಕೊರೊನಾ ವೈರಸ್ ಕೂಡ ಒಂದು. ಜ್ವರ, ಕೆಮ್ಮು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಕೂಡಲೇ ಚಿಕಿತ್ಸೆ ಪಡೆದರೆ ಉತ್ತಮ, ಜೊತೆಗೆ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡರೆ ಕೊರೊನಾದಿಂದ ದೂರ ಇರಬಹುದು ಎಂದು ಸಲಹೆ ನೀಡಿದರು.
ಹೊರ ರಾಜ್ಯದವರಿಂದಲೇ ಹೆಚ್ಚು ಸೋಂಕು ಬಂದಿದೆ. ಕೊರೊನಾ ವೈರಸ್ ಎದುರಿಸಲು ನಾವು ಸಿದ್ಧರಿದ್ದೇವೆ. ಮೊದಲು ಲಾಕ್ಡೌನ್ ಆದ ವೇಳೆ ಅಷ್ಟೊಂದು ಸಿದ್ಧತೆಗಳಿರಲಿಲ್ಲ. ಆದರೆ ಇದೀಗ ಅಗತ್ಯ ಸಿದ್ಧತೆಗಳಾಗಿವೆ. ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
ಸೋಂಕಿತರಿಗೆ ಶೇ. 5 ರಿಂದ ಶೇ. 7 ರಷ್ಟು ಮಾತ್ರ ಕೋವಿಡ್ 19 ಆಸ್ಪತ್ರೆ ಬೆಡ್ ಬೇಕಾಗುತ್ತದೆ. ಉಳಿದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕನಕಪುರದಲ್ಲಿ ಡಿ. ಕೆ. ಶಿವಕುಮಾರ್ ಲಾಕ್ಡೌನ್ ಘೋಷಣೆ ಮಾಡಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಹಾಗೆ ಆದೇಶ ಮಾಡಲು ಬರುವುದಿಲ್ಲ. ಡಿಕೆಶಿ ಬಗ್ಗೆ ಮಾತನಾಡಲು ಹೊರಟರೆ ಎಪಿಸೋಡ್ಗಳೇ ಆಗುತ್ತವೆ ಎಂದು ಟಾಂಗ್ ನೀಡಿದರು.
ಲಾಕ್ಡೌನ್ ಮಾಡುವ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಸರ್ಕಾರಕ್ಕೆ ಸಲಹೆ ಕೊಡಬಹುದಷ್ಟೇ. ಅವರೇ ತೀರ್ಮಾನ ಮಾಡಲು ಬರುವುದಿಲ್ಲ ಎಂದರು.