ಬೆಂಗಳೂರು: ಪ್ರಸ್ತುತ ಕಾಂಗ್ರೆಸ್ನಲ್ಲಿನ ವಿದ್ಯಮಾನ ಅವರ ಪಕ್ಷದ ಆಂತರಿಕ ವಿಚಾರ ಆದರೂ ಇಂತಹ ಪರಿಸ್ಥಿತಿ ಆ ಪಕ್ಷಕ್ಕೆ ಬರಬಾರದಿತ್ತು ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ ವ್ಯಂಗ್ಯವಾಡಿದ್ದಾರೆ.
ಮಲ್ಲೇಶ್ವರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆರಂಭಗೊಂಡಿದೆ. ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಪಕ್ಷ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷದ ವಿಸರ್ಜನೆಗೆ ಗಾಂಧಿಯವರೇ ಸಲಹೆ ಕೊಟ್ಟಿದ್ದರು. ಇದು ಸ್ವಾತಂತ್ರ್ಯಕ್ಕಾಗಿ ಮಾಡಿದ ಒಂದು ಸಂಸ್ಥೆ ಆಗಿತ್ತು. ಆದರೆ ಆಗ ವಿಸರ್ಜನೆ ಆಗಲಿಲ್ಲ. ಈಗಲಾದರೂ ಕಾಂಗ್ರೆಸ್ ಪಕ್ಷ ವಿಸರ್ಜನೆ ಆದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ನಲ್ಲಿ ಅಧ್ಯಕ್ಷರು ಯಾರಾಗಬೇಕು ಅನ್ನೋದು ಅವರ ಪಕ್ಷದ ಆಂತರಿಕ ವಿಚಾರ. ನಾವು ಅವರ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ. ಇಂತಹ ಪರಿಸ್ಥಿತಿ ಆ ಪಕ್ಷಕ್ಕೆ ಬರಬಾರದಿತ್ತು. ಈಗಲಾದರೂ ಕಾಂಗ್ರೆಸ್ನಲ್ಲಿ ಪ್ರಜಾಪ್ರಭುತ್ವ, ಪ್ರಶ್ನೆ ಮಾಡೋ ಪರಿಸ್ಥಿತಿ ಬಂದಿರೋದು ಸಂತೋಷ. ಹಿಂದೆ ಎಲ್ಲರೂ ಬಾಯಿ ಮುಚ್ಕೊಂಡು ಸಹಿಸಿಕೊಂಡು ಹೋಗೋ ವಾತಾವರಣ ಇತ್ತು ಎಂದು ಡಿಸಿಎಂ ಅಶ್ವತ್ಥ ನಾರಾಯಣ ವ್ಯಂಗ್ಯವಾಡಿದರು.