ಬೆಂಗಳೂರು: ಮೆಟ್ರೋ ನಿಗಮ ನಿಯಮಿತ ಅಧಿಕಾರಿಗಳೊಂದಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ವಿಧಾನಸೌಧದಲ್ಲಿ ಸಭೆ ನಡೆಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ 42 ಕಿ.ಮೀ.ಮೆಟ್ರೋ ಕಾಮಗಾರಿ ಪೂರ್ಣಗೊಂಡಿದ್ದು, ದೆಹಲಿ ಮೆಟ್ರೋದಲ್ಲಿ ಕಳೆದ ಏಳು ವರ್ಷದಲ್ಲಿ 210 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ತ್ವರಿತಗತಿಯಲ್ಲಿ ಕಾಮಗಾರಿ ನಡೆಸಲು ಬೆಂಗಳೂರು ಮೆಟ್ರೋ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಯಿತು.
ಯಾವುದೇ ಸರ್ಕಾರಿ ಯೋಜನೆಯನ್ನು ಜಾರಿಗೊಳಿಸಲು ಎದುರಾಗುವ ಅಡ್ಡಿ ಆತಂಕಗಳನ್ನು ನಿವಾರಿಸಲು ಬೇಕಾದ ವಿಶೇಷ ವಾರ್ ರೂಮ್ ಮಾದರಿ ವ್ಯವಸ್ಥೆಯನ್ನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದ್ದು, ಅದನ್ನು ಅಭ್ಯಾಸ ನಡೆಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಿಯೋಗವನ್ನು ಮುಂಬೈಗೆ ಕಳಿಸಲು ನಿರ್ಧರಿಸಲಾಗಿದೆ.
ಇದಕ್ಕೂ ಮುನ್ನ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇರುವ ಕಿರು ಅರಣ್ಯಗಳನ್ನು ಗುರುತಿಸಿ ಅದರಲ್ಲಿರುವ ಜೀವ ವೈವಿಧ್ಯಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಬ್ಬನ್ ಪಾರ್ಕ್, ಲಾಲ್ ಬಾಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಜನರಿಗೆ ಅನುಕೂಲ ವಾಗುವಂತೆ ಮಾಡಲು ಸಾಧಕ ಭಾದಕಗಳ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ರು.
ಅದೇ ರೀತಿ ಸಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಪ್ರಯುಕ್ತ ವಿಶೇಷ ಅಭಿಯಾನದ ಮೂಲಕ ಗಿಡಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗಿದೆ.