ಬೆಂಗಳೂರು: ಆರೋಗ್ಯಕ್ಕೆ ಸಂಬಂಧಿಸಿದ ಸಂಭಾವ್ಯ ಅಪಾಯವನ್ನು ವ್ಯಕ್ತಿಗತ ಮಟ್ಟದಲ್ಲಿ ನಿರ್ಧರಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಳ್ಳುವ ದಿಸೆಯಲ್ಲಿ ಉದ್ಯಮ ಕ್ಷೇತ್ರ, ಶೈಕ್ಷಣಿಕ ವಲಯ ಮತ್ತು ಸರ್ಕಾರ ಪರಸ್ಪರ ಕೈಜೋಡಿಸಬೇಕು ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಕೃತಕ ಬುದ್ಧಿಮತ್ತೆ ವಾರ ಆಚರಣೆಯ ಅಂಗವಾಗಿ ಇಂಟೆಲ್ ಸಂಸ್ಥೆಯು ಇಂದು ಸಂಜೆ ಏರ್ಪಡಿಸಿದ್ದ ವರ್ಚುಯಲ್ ಕಾರ್ಯಕ್ರಮದಲ್ಲಿ ಆರೋಗ್ಯ ಸೇವೆಯಂತಹ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಯಶಸ್ವಿ ಆನ್ವಯಿಕತೆ ಕುರಿತು ಮಾತನಾಡಿದ ಸಂದರ್ಭದಲ್ಲಿ ಹೀಗೆ ಅಭಿಪ್ರಾಯಪಟ್ಟರು.
ಯಾವುದೇ ವೈರಸ್ ಎಲ್ಲರ ಮೇಲೂ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ. ಅದು ವರ್ತಿಸುವ ರೀತಿ ಹಾಗೂ ಬೀರುವ ಪರಿಣಾಮವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಎಂಬುದು ಕೊರೊನಾ ಸೋಂಕಿನ ಸಂದರ್ಭದಲ್ಲಿ ಚೆನ್ನಾಗಿಯೇ ಅನುಭವಕ್ಕೆ ಬಂದಿದೆ. ಹೀಗಾಗಿ ಚಿಕಿತ್ಸೆ ಮತ್ತು ಔಷಧೋಪಚಾರದ ಬಗ್ಗೆ ಕೂಡ ಸಮುದಾಯ ದೃಷ್ಟಿಕೋನದಿಂದ ನೋಡದೆ ವ್ಯಕ್ತಿಗತ ಮಟ್ಟದಲ್ಲೇ ವಿಶ್ಲೇಷಿಸಬೇಕಾಗುತ್ತದೆ ಎಂದು ವಿವರಿಸಿದರು.
ಕೃತಕ ಬುದ್ಧಿಮತ್ತೆ ತಾಂತ್ರಿಕತೆ ಹಾಗೂ ಬೃಹತ್ ದತ್ತಾಂಶವನ್ನು ಬಳಸಿ ಇದನ್ನು ಸಾಧಿಸಲು ಅಪಾರ ಅವಕಾಶವಿದೆ. ಅದರಲ್ಲೂ ಸ್ಮಾರ್ಟ್ ಫೋನ್ ಬಳಕೆ ಹೆಚ್ಚುತ್ತಿರುವ ಭಾರತದಂತಹ ದೇಶದಲ್ಲಿ ಇದನ್ನು ಬಳಸಿಕೊಂಡು ಪ್ರತಿಯೊಬ್ಬ ಪ್ರಜೆಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಸುಲಭ ದರದಲ್ಲಿ ಒದಗಿಸಬಹುದಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಯವರು ಭಾರತೀಯ ಕಾರ್ಮಿಕ ಮಾರುಕಟ್ಟೆ ಮೇಲೆ ಕೃತಿಕ ಬುದ್ಧಿಮತ್ತೆ ಪರಿಣಾಮ ಕುರಿತ ವರದಿಯನ್ನು ಬಿಡುಗಡೆ ಮಾಡಿದರು. ಈ ವೇಳೆ ಇಂಟೆಲ್ ಇಂಡಿಯಾ ಮುಖ್ಯಸ್ಥರಾದ ನಿವೃತಿ ಮತ್ತಿತರ ಪ್ರಮುಖರು ಹಾಜರಿದ್ದರು.