ಬೆಂಗಳೂರು: ಕೋವಿಡ್ ಲಾಕ್ಡೌನ್ನಿಂದ ಚಿತ್ರರಂಗದ ಕಲಾವಿದರಿಗೆ ಸಮಸ್ಯೆಯಾಗಿದೆ. ಸಮಾಜದ ಹಲವು ಗಣ್ಯರು ಇವರ ಸಹಾಯಕ್ಕೆ ಬರಬೇಕೆಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹೇಳಿದರು.
ಭರತ್ ಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಚಿತ್ರರಂಗದ ಸುಮಾರು 200 ಮಂದಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭರತ್ ಗೌಡ ಚಾರಿಟೇಬಲ್ ಟ್ರಸ್ಟ್ನಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಗುತ್ತಿದೆ. ನನ್ನ ಕಡೆಯಿಂದ ಒಬೊಬ್ಬ ಕಲಾವಿದರಿಗೆ ಒಂದು ಸಾವಿರ ರೂಪಾಯಿ ಕೊಡುತ್ತಿದ್ದೇನೆ. ಸಿಎಂ ಜೊತೆ ಮಾತನಾಡಿ ಕಲಾವಿದರಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದರು. ಸಿಎಂ ಗೃಹ ನಿರ್ಮಾಣ ಯೋಜನೆಯಡಿ ಕಲಾವಿದರು ಅರ್ಜಿ ಹಾಕಲಿ, ಅವರಿಗೆ ಮನೆ ಕೊಡಿಸುವ ಕೆಲಸ ಮಾಡುತ್ತೇವೆ ಜೊತೆಗೆ ಸರ್ಕಾರದಿಂದ ಸಬ್ಸಿಡಿ ಕೊಡುತ್ತೇವೆ ಎಂದು ಡಿಸಿಎಂ ಭರವಸೆ ನೀಡಿದರು.
ಲಸಿಕೆ ಲಭ್ಯವಿಲ್ಲದಿದ್ದರೂ ಅಭಿಯಾನಕ್ಕೆ ಚಾಲನೆ: ಲಸಿಕೆ ಕೊರತೆಯಿದ್ದರೂ ಅಭಿಯಾನಕ್ಕೆ ಚಾಲನೆ ನೀಡಿದ ಬಗ್ಗೆ ಡಿಸಿಎಂ, ಲಸಿಕೆ ಅಭಾವ ಇರುವುದು ನಿಜ. ಲಸಿಕೆ ವಿಚಾರದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅದು ಸ್ಟಾಕ್ ಇಟ್ಟುಕೊಳ್ಳುವಂತದಲ್ಲ, ಲಭ್ಯವಾದಂತೆ ನೀಡಲಾಗುತ್ತದೆ ಎಂದರು.
ಬ್ಲ್ಯಾಕ್ ಫಂಗಸ್ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿ, ನಾನು ಬ್ಲ್ಯಾಕ್ ಫಂಗಸ್‌ಗೆ ಔಷಧ ಇದೆ ಎಂದು ಹೇಳಿಲ್ಲ. ಅದಕ್ಕೆ ಪರ್ಯಾಯ ಔಷಧದ ಬಗ್ಗೆ ಹೇಳಿದ್ದೇನೆ. ಬ್ಲ್ಯಾಕ್ ಫಂಗಸ್ ಹೊಸ ರೋಗವಲ್ಲ, ನನ್ನ ಹೇಳಿಕೆಗೂ ಸುಧಾಕರ್ ಹೇಳಿಕೆಗೂ ವ್ಯತ್ಯಾಸವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಬ್ಲಾಕ್ ಫಂಗಸ್ ಔಷಧಿ ಕೊರತೆ ಆತಂಕ: ಬಾಕಿ ಬಿಲ್ ಪಾವತಿಸುವಂತೆ ಸರ್ಕಾರಕ್ಕೆ ಪತ್ರ
ಕೋವಿಡ್ ಸಾವಿನ ಅಂಕಿ ಅಂಶಗಳು ಮರೆ ಮಾಚಲಾಗುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಡಿಸಿಎಂ, ಸರ್ಕಾರ ಸಾವಿನ ಸಂಖ್ಯೆಯಲ್ಲಿ ಸುಳ್ಳು ಹೇಳಿಲ್ಲ. ಸಾವಿನ ಕಾರಣ ಎಲ್ಲವೂ ದಾಖಲಾಗುತ್ತಿದೆ, ಚಿಕಿತ್ಸೆ, ಅಂತ್ಯಕ್ರಿಯೆ ಎಲ್ಲದರ ಮಾಹಿತಿ ಇದೆ. ಸಿದ್ದರಾಮಯ್ಯನವರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಮರಣ ಹಾಗೂ ಸೋಂಕಿತರ ಸಂಖ್ಯೆ ನಿಖರವಾಗಿದೆ. ಯಾವುದನ್ನೂ ಮರೆಮಾಚುವ ಅವಶ್ಯಕತೆ ಇಲ್ಲ ಎಂದರು.
200 ಕಲಾವಿದರ ಮನೆ ಬಾಗಿಲಿಗೆ ಕಿಟ್
ಡಿಸಿಎಂ ಸಾಂಕೇತಿಕವಾಗಿ 30 ಕಲಾವಿದರಿಗೆ ಕಿಟ್ ವಿತರಣೆ ಮಾಡಿದ್ದು, ಉಳಿದ 200 ಕಿಟ್‌ಗಳನ್ನು ಕಲಾವಿದರ ಮನೆಗೆ ತಲುಪಿಸಲಾಗುವುದು ಎಂದು ಭರತ್ ಗೌಡ ಮಾಹಿತಿ ನೀಡಿದರು.
ಹಿರಿಯ ಕಲಾವಿದರಾದ ಹೊನ್ನಳ್ಳಿ ಕೃಷ್ಣ, ಮೀಸೆ ಅಂಜನಪ್ಪ, ಉಮೇಶ್ ಹೆಗ್ಡೆ, ಡಿಂಗ್ರಿ ನಾಗರಾಜ್, ಸಿತಾರಾ, ನಟರಾದ ಗಣೇಶ್ ರಾವ್ ಕೆಸರ್ಕಾರ್ ಸೇರಿದಂತೆ ಹಲವರು ಇದ್ದರು.