ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ದಸರಾ ವಿಶೇಷವಾಗಿ ಬೊಂಬೆಗಳು ಹಾಗು ವಿವಿಧ ರೀತಿಯ ಅಲಂಕಾರಿಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಲಾಗಿದೆ.
ದಸರಾ ಹಬ್ಬದ ಅಲಂಕಾರಿಕ ವಸ್ತುಗಳ ವಸ್ತುಪ್ರದರ್ಶನ ನಡೆಯುವ ಅರ್ಬನ್ ಬಜಾರ್ಗೆ ಮಾಜಿ ಸಚಿವೆ ರಾಣಿ ಸತೀಶ್ ಹಾಗೂ ನಟಿ ಅದ್ವಿತಿ ಶೆಟ್ಟಿ ಚಾಲನೆ ನೀಡಿದರು. ಈ ಮೇಳ ಸೆಪ್ಟೆಂಬರ್ 13 ರಿಂದ 22 ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಾಡಾಗಿದೆ.
ನಾಡ ಹಬ್ಬ ದಸರಾ ಆಚರಣೆಗೆ ಬೇಕಾದ ಬೊಂಬೆಗಳು ಹಾಗೂ ಇನ್ನಿತರೆ ಅಲಂಕಾರಿಕ ಮತ್ತು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರ ಕಲಾಕೃತಿಗಳು ಒಂದೇ ವೇದಿಕೆಯಡಿ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ತರಹೇವಾರಿ ಆಕರ್ಷಕ ಸೀರೆಗಳು, ಅಲಂಕಾರಿಕ ವಸ್ತುಗಳು ಸೇರಿದಂತೆ ಕಲಾಕೃತಿಗಳು ಮಾರಾಟಕ್ಕೆ ದೊರೆಯುವುದು ಬಹಳ ವಿಶೇಷವಾಗಿದೆ ಎಂದು ರಾಣಿ ಸತೀಶ್ ಹೇಳಿದರು.
ನಟಿ ಅದ್ವಿತ ಶೆಟ್ಟಿ ಮಾತನಾಡಿ, ಒಂದೇ ಕಡೆ ವಿಶಿಷ್ಟ ರೀತಿಯ ಸಾಮಗ್ರಿಗಳು ದೊರೆಯುವ ವ್ಯವಸ್ಥೆಯನ್ನು ಅರ್ಬನ್ ಬಜಾರ್ ಮಾಡಿದೆ. ಇಂತಹ ಕಲಾಕೃತಿಗಳೂ ಹಾಗೂ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಪ್ರದರ್ಶನಗಳು ಆಗಾಗ್ಗೆ ನಡೆಯುತ್ತಿರಬೇಕು. ಇಲ್ಲಿ ಪ್ರದರ್ಶನಕ್ಕಿಟ್ಟಿರುವ ದಸರಾ ಬೊಂಬೆಗಳ ಅಂದ ನೋಡಲು ಎರಡು ಕಣ್ಣು ಸಾಲದು ಎಂದು ಹರ್ಷ ವ್ಯಕ್ತಪಡಿಸಿದ್ರು.
ಈ ಪ್ರದರ್ಶನ ಹಾಗೂ ಮಾರಾಟ ಮೇಳದ ಪ್ರಮುಖ ಆಕರ್ಷಣೆ ದಸರಾ ಬೊಂಬೆಗಳು. ಎಲ್ಲಾ ರೀತಿಯ ಹಾಗೂ ವಿಭಿನ್ನ ಆಯಾಮದ ಗೊಂಬೆಗಳನ್ನು ಗ್ರಾಹಕರು ಖರೀದಿಸಬಹುದಾಗಿದೆ. ಇದರ ಜೊತೆಯಲ್ಲಿಯೇ ಹಬ್ಬಕ್ಕೆ ಬೇಕಾಗಿರುವ ಸಾಮಗ್ರಿಗಳನ್ನೂ ಇಲ್ಲಿ ಕೊಳ್ಳಬಹುದಾಗಿದೆ. 100 ಕ್ಕೂ ಹೆಚ್ಚು ಮಳಿಗೆಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರು ತಮ್ಮ ಕುಸುರಿ ಕಲೆಯನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿದೆ.