ಬೆಂಗಳೂರು: ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ ಶಾಂತನಪುರ ಗ್ರಾಮದಲ್ಲಿ ಸುಮಾರು 500 ರಿಂದ 600 ಕೋಟಿ ರೂ. ಮೌಲ್ಯದ 200 ಎಕರೆ ಜಮೀನಿಗೆ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಭೂ ಕಬಳಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆಗೆ ಒಪ್ಪಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿ ವೇಳೆಯಲ್ಲಿ ಬಿಜೆಪಿಯ ರಘುನಾಥ್ ರಾವ್ ಮಲ್ಕಾಪೂರೆ ಅವರು ಕೇಳಿದ ಪ್ರಶ್ನೆಗೆ ಸಚಿವ ಆರ್.ಅಶೋಕ್ ಉತ್ತರಿಸಿ, ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಶಾಂತನಪುರ ಗ್ರಾಮದಲ್ಲಿ1970 ರಲ್ಲಿ 50 ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ತಲಾ ನಾಲ್ಕು ಎಕರೆಯಂತೆ 200 ಎಕರೆ ಜಮೀನನ್ನು ನೀಡಲಾಗಿತ್ತು. ಅದನ್ನು ಎರಡು ವರ್ಷಗಳಲ್ಲೇ ನೋಂದಣಿ ಮಾಡಿಕೊಂಡು ಅಕ್ರಮವೆಸಗಲಾಗಿದೆ. ಅದರ ಮೌಲ್ಯ ಸುಮಾರು 500 ರಿಂದ 600 ಕೋಟಿ ರೂಪಾಯಿಗಳು ಎಂದರು.
ಈ ಜಮೀನಿಗೆ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ, ದಲಿತರನ್ನು ಬಲವಂತವಾಗಿ ಹೊರಹಾಕಿ ಭೂ ಕಬಳಿಕೆ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಸಂಬಂಧ 12 ಜನರ ವಿರುದ್ಧ 6 ಪ್ರಕರಣಗಳನ್ನು ದಾಖಲಿಸಲಾಗಿದೆ. ಶಾಂತನಪುರ ಗ್ರಾಮದ ಸರ್ವೇ ನಂಬರ್ 9, ಮೂಲತಃ ಸರ್ಕಾರಿ ಖರಾಬು ಜಮೀನಾಗಿದ್ದು, ಈ ಜಮೀನಿಗೆ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಭೂ ಕಬಳಿಕೆ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ, ಪ್ರಕರಣವನ್ನು ಎಸಿಬಿ ತನಿಖೆಗೆ ಒಪ್ಪಿಸಿ ಆದೇಶ ಹೊರಡಿಸುವೆ ಎಂದು ತಿಳಿಸಿದರು.