ಬೆಂಗಳೂರು: ರಾಜ್ಯದ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರತಿನಿತ್ಯ 10 ನಿಮಿಷ ಧ್ಯಾನ ಶಿಬಿರ (ಮೆಡಿಟೇಶನ್) ನಡೆಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಈ ಸಂಬಂಧ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸುತ್ತೋಲೆಯನ್ನು ಕಳುಹಿಸಿದ್ದಾರೆ.
ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ 10 ನಿಮಿಷದ ಧ್ಯಾನ ಶಿಬಿರ ನಡೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಲಾಗಿದೆ. ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸಲು, ಆರೋಗ್ಯ ಸುಧಾರಿಸಲು, ಸಕಾರಾತ್ಮಕ ಚಿಂತನೆ ಮೂಡಿಸಲು, ಒತ್ತಡ ರಹಿತ ಕಲಿಕೆ, ವ್ಯಕ್ತಿತ್ವ ವಿಕಸನ ಮತ್ತು ಆ ಮೂಲಕ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ ಎಂದು ನಾಗೇಶ್ ಗುರುವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಟಿಪ್ಪಣಿಯ ಪ್ರಕಾರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಕೆಲವು ಶಾಲೆಗಳು ಈಗಾಗಲೇ ಧ್ಯಾನ ಶಿಬಿರಗಳನ್ನು ನಡೆಸುತ್ತಿವೆ ಎಂದು ಅದರಲ್ಲಿ ಹೇಳಲಾಗಿದೆ.