ಬೆಂಗಳೂರು: ನಮ್ಮ ಕರ್ನಾಟಕವು ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿ ತನ್ನದೇ ಆದ ಇತಿಹಾಸ ಮತ್ತು ಛಾಪು ಹೊಂದಿರುವ ಪ್ರಗತಿಪರ ರಾಜ್ಯವೆಂದು ಸಂಸದ ಡಿ.ಕೆ ಸುರೇಶ್ ಅಭಿಪ್ರಾಯಪಟ್ಟರು. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರತಿವರ್ಷವೂ ರಾಜ್ಯಕ್ಕೆ ತನ್ನದೇ ಆದ ಸ್ಥಾನಮಾನವನ್ನು ದೇಶವು ಕೊಟ್ಟುಕೊಂಡು ಬರುತ್ತಿತ್ತು. ಆದರೆ ಈ ಬಾರಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ನಮ್ಮ ಕರ್ನಾಟಕದ ಪರಂಪರೆ ಶಕ್ತಿ ತೋರಿಸಲು ಜನವರಿ 26ರ ಗಣರಾಜ್ಯೋತ್ಸವ ದಿನದಂದು ಟ್ಯಾಬ್ಲೋ ಪ್ರದರ್ಶನಕ್ಕೆ ಕೇಂದ್ರ ಅವಕಾಶ ಮಾಡಿಕೊಟ್ಟಿಲ್ಲ. ರಾಜ್ಯಕ್ಕೆ ಯಾವ ಮಟ್ಟಕ್ಕೆ ಅನ್ಯಾಯವಾಗುತ್ತಿದೆ ಎಂಬುದು ಇದರಿಂದಲೇ ತಿಳಿಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗುಜರಾತ್ ಅನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಗುಜರಾತಿಗೆ ಕೊಡೋ ಆದ್ಯತೆಯನ್ನು ಉಳಿದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಅಲ್ಲದೇ ಏರ್ ಶೋ ವಿಚಾರದಲ್ಲೂ ಬಹಳಷ್ಟು ಗೊಂದಲ ಸೃಷ್ಟಿ ಮಾಡಿದ್ದರು. ಇದೀಗ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆಗುತ್ತಿರುವ ಅಪಮಾನವನ್ನು ಕನ್ನಡಿಗರು ಎಂದಿಗೂ ಸಹಿಸುವುದಿಲ್ಲ. ಎಲ್ಲ ಸಂಸತ್ ಸದಸ್ಯರು ಪ್ರಧಾನಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಒತ್ತಡ ಹೇರಬೇಕಿದೆ. ಇಲ್ಲವಾದಲ್ಲಿ ಕೇಂದ್ರ ಸಚಿವರುಗಳಿಗೆ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚುನಾವಣೆಯ ಸಂದರ್ಭದಲ್ಲಿ ಕೇವಲ ಭಾವನಾತ್ಮಕ ವಿಷಯವನ್ನು ಮುಂದಿಟ್ಟುಕೊಂಡೇ ಜನರ ಮನಸ್ಸನ್ನು ಗೆಲ್ಲಲು ನೋಡುತ್ತಿದ್ದಾರೆ. ರಾಜ್ಯದ ಕೆಲವೊಂದು ಯೋಜನೆಗಳು ಐದು ವರ್ಷ ಕಳೆದರೂ ಕೇಂದ್ರದಿಂದ ಅನುಮೋದನೆ ಆಗಿಲ್ಲ. ಇದಲ್ಲದೇ ಕನ್ನಡದ ಶ್ರೇಷ್ಠ ಕವಿ ಕುವೆಂಪು ಅವರಿಗೂ ಅವಮಾನವನ್ನು ಮಾಡಿದ್ದಾರೆ. ಇದೆಲ್ಲದಕ್ಕೂ ತಕ್ಕ ಪಾಠ ಕಲಿಸಲೇಬೇಕಿದೆ ಎಂದು ಹರಿಹಾಯ್ದರು.
ಇದನ್ನೂ ಓದಿ:ಸರ್ಕಾರಕ್ಕೆ ಬಿಸಿ ತುಪ್ಪವಾದ ಪಂಚಮಸಾಲಿ ಸಮುದಾಯದ ಗಡುವು: ವಚನಾನಂದ ಶ್ರೀ ಮೊರೆ ಹೋದರಾ ಬಿಜೆಪಿ ನಾಯಕರು..?
ಕರ್ನಾಟಕ ಅಂದ್ರೆ ಹೇಳೋರು ಕೇಳೋರು ಯಾರಿಲ್ಲ ಅಂತಾಗಿದೆ. ರಾಜ್ಯಕ್ಕೆ ಯಾವುದೇ ಅನುದಾನ ಸರಿಯಾಗಿ ಬಂದಿಲ್ಲ. ಕೇವಲ ಪ್ರಚಾರ ಮಾತ್ರ ಜೋರಾಗಿ ಮಾಡುತ್ತಿದ್ದಾರೆ. ಬಾಯಿ ಮಾತಿಗೆ ನಮ್ಮದು ಡಬಲ್ ಇಂಜಿನ್ ಸರ್ಕಾರ ಅಂತಾರೆ. ಆದರೆ ಮಾಡುವುದು ಮಾತ್ರ ಡಬಲ್ ಆ್ಯಕ್ಟಿಂಗ್. ಇದಕ್ಕೆ ಉದಾಹರಣೆಯೆಂಬಂತೆ ವಿಧಾನಸೌಧದಲ್ಲಿ ಸಿಕ್ಕ ಹಣ. ಇದೆಲ್ಲವನ್ನೂ ಜನರು ಗಮನಿಸುತ್ತಿದ್ದಾರೆ. ಈ ಬಾರಿ ಕರ್ನಾಟಕ ಜನತೆ ಎಚ್ಚೆತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತೊಡೆದು ಹಾಕುತ್ತಾರೆ. ರಾಜ್ಯದಲ್ಲಿ ಗುಜರಾತ್ ಆಡಳಿತ ನಡೆಯುತ್ತಿದೆ. ಎಲ್ಲಾ ರಾಜ್ಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಸ್ಯಾಂಟ್ರೋ ರವಿ ವಿಚಾರ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಯಾಂಟ್ರೋ ರವಿಗೆ ಸರ್ ಅಂತಾರೆ. ಹಾಗಿದ್ದ ಮೇಲೆ ಪೊಲೀಸರು ಕೂಡ ಆತನಿಗೆ ಸೆಲ್ಯೂಟ್ ಹೊಡೆಯಬೇಕಾಗುತ್ತೆ. ನನಗನಿಸುವ ಪ್ರಕಾರ ಸಿಎಂ ವೀಕ್ನೆಸ್ ಅವನ ಬಳಿಯೇ ಇರಬೇಕು. ಅದಕ್ಕೆ ರವಿ ಹೇಳಿದಂತೆ ಕೇಳುವ ಪರಿಸ್ಥಿತಿ ಸಿಎಂ ಸೇರಿದಂತೆ ಸಚಿವರುಗಳಿಗೆ ಬಂದಿದೆ. ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಎಲ್ಲಿ ನೋಡಿದ್ರು ಸಿ.ಡಿ ಅಂತಾರೆ. ಬಿಜೆಪಿಯಲ್ಲಿ ನಡೀತಾ ಇರೋದು ಸಿ.ಡಿ ರಾಜಕೀಯ. ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಯಾವ ಸಿ.ಡಿ ಬಿಡುಗಡೆ ಮಾಡುತ್ತಾರೋ ಮಾಡಲಿ ಎಂದು ಹೇಳಿದರು.
ಕೆಜಿಎಫ್ ಬಾಬು ಕಾಂಗ್ರೆಸ್ ಪಕ್ಷಕ್ಕೆ 80 ಸೀಟು ಸಿಗೋಲ್ಲ ಎಂದು ಹೇಳಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಜಿಎಫ್ ಬಾಬುಗೆ ಕಾಂಗ್ರೆಸ್ ಇತಿಹಾಸವೇ ತಿಳಿದಿಲ್ಲ. ಬಾಬುಗೆ ಮೆಂಟಲ್ ಬ್ಯಾಲೆನ್ಸ್ ಕಡಿಮೆ ಆಗಿರೋ ಹಾಗೆ ಕಾಣಿಸುತ್ತಿದೆ. ಅವರ ಮೆಲೆ ನಮಗೊಂದು ಗೌರವವಿತ್ತು. ಹಾಗಾಗಿಯೇ ಪಕ್ಷದಲ್ಲಿ ಅವರಿಗೊಂದು ಸ್ಥಾನ ಮಾನ ಕೊಟ್ಟಿದ್ದೆವು. ಆದರೆ ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಅವರು ನೀಡಿದ ಹೇಳಿಕೆ ಖಂಡಿತ ಅವರದ್ದಲ್ಲ. ಅದು ಇಡಿ ಹೇಳಿಕೆ. ದೆಹಲಿ ಜಾರಿ ನಿರ್ದೇಶನಾಲಯ ಕಚೇರಿಯಿಂದ ಕೆಜಿಎಫ್ ಬಾಬು ವಾಪಸ್ ಬಂದ ಮೇಲೆ ಇಂತಹ ಆ್ಯಕ್ಟಿವಿಟಿಸ್ ನಡೆಯುತ್ತಿದೆ. ಇಡಿ ಕಚೇರಿಗೆ ಹೋಗಿ ಬಂದವರ ಸ್ಟೇಟ್ಮೆಂಟ್ ನೋಡಬೇಕು. ಕೆಜಿಎಫ್ ಬಾಬು ದೆಹಲಿಯ ಇಡಿ ಕಚೇರಿಯಿಂದ ವಾಪಸ್ ಬಂದ ಮೇಲೆ ಇಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಿಂದ ಕೆಜಿಎಫ್ ಬಾಬು ಅಮಾನತು: ಕೆಪಿಸಿಸಿ ಆದೇಶ