ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಸಿರುವುದಕ್ಕೆ ಹೆದರುವ ಅಗತ್ಯವಿಲ್ಲ ಎಂದು ಸಂಸದ ಡಿ. ಕೆ ಸುರೇಶ್ ಹೇಳಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚಾರ್ಜ್ ಶೀಟ್ ಸಲ್ಲಿಕೆಗೆ ನಾವು ಹೆದರುವ ಅಗತ್ಯವಿಲ್ಲ. ಚಾರ್ಜ್ ಶೀಟ್ ಸಲ್ಲಿಕೆ ಒಂದು ಕಾನೂನು ಪ್ರಕ್ರಿಯೆ. ಇದರಲ್ಲಿ ಏನಿದೆ ಅಂತಾ ನಮಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ. ನಮ್ಮ ವಕೀಲರ ಜೊತೆ ಚರ್ಚಿಸುತ್ತೇವೆ ಎಂದರು.
ರಾಜಕೀಯ ಪ್ರೇರಿತವಾಗಿ ನಮ್ಮ ಮೇಲೆ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ನಮ್ಮ ಹೋರಾಟ ನಡೆಯುತ್ತಿರುತ್ತೆ. ನಾವು ಹೆದರುವ ಪ್ರಶ್ನೆಯೇ ಇಲ್ಲ. ಏನೇ ಷಡ್ಯಂತ್ರ ಮಾಡಿದ್ರೂ ನಾವು ಹೆದರಲ್ಲ. ನಾವು ಎಲ್ಲದಕ್ಕೂ ಸಿದ್ಧ. ಮಾನಸಿಕವಾಗಿ, ದೈಹಿಕವಾಗಿ ಎಲ್ಲ ರೀತಿಯಲ್ಲಿ ಪ್ರಕರಣ ಎದುರಿಸಲು ಸಿದ್ಧರಾಗಿದ್ದೇವೆ ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಸ್ವಾಯತ್ತ ಸಂಸ್ಥೆಗಳು ಕೈಕಟ್ಟಿ ಕುಳಿತಿವೆ. ಐಟಿ, ಸಿಬಿಐ, ಇಡಿ ತಮ್ಮ ಸ್ವಂತ ಇಚ್ಛಾಶಕ್ತಿಯಿಂದ ಕೆಲಸ ಮಾಡ್ತಿಲ್ಲ. ನ್ಯಾಯಾಯಲಗಳ ಮೇಲೂ ಒತ್ತಡ ಇದೆ. ಪ್ರತಿಪಕ್ಷವಾಗಿ ನಾವು ಇವರಿಂದ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವಾಗುತ್ತೆ. ಏನು ಚಾರ್ಜ್ ಶೀಟ್ ಹಾಕಿದ್ದಾರೆ, ಅದರ ವಿರುದ್ಧ ಕಾನೂನು ಹೋರಾಟ ಮಾಡ್ತೇವೆ. ಬಿಜೆಪಿಯ ಏನೇ ತಂತ್ರ, ಒಳಸಂಚು ಇದ್ರು ಅದರ ವಿರುದ್ಧ ಸಂಪೂರ್ಣ ಹೋರಾಟ ಮಾಡ್ತೇವೆ. ವಿಚಾರಣೆ 4 ವರ್ಷದಿಂದ ನಡೆಯುತ್ತಿದೆ. ಇನ್ನು ನಡೆಯಲಿ ಎಂದು ಹೇಳಿದರು.
ವಿಶೇಷ ಪೂಜೆ.. ಡಿ.ಕೆ ಶಿವಕುಮಾರ್ ಮನೆಯಲ್ಲಿ ಹೋಮ ಹವನ ನಡೆಯುತ್ತಿದೆ. ವಿಶೇಷ ಪೂಜೆ ನೆರವೇರುತ್ತಿರುವ ಸಂದರ್ಭದಲ್ಲೇ ಕಾಕತಾಳಿಯವಾಗಿ ಶಿವಕುಮಾರ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯೂ ಆಗಿದೆ ಎಂದು ಸಹೋದರ ಡಿ ಕೆ ಸುರೇಶ್ ತಿಳಿಸಿದರು.
ಓದಿ: ಮಳಲಿ ಮಸೀದಿ ವಿವಾದ - ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದ ಮಠ ನಮ್ದೇ ಆಗಿರುವ ಸಾಧ್ಯತೆ; ಜಂಗಮ ಮಠ ಪ್ರತಿಪಾದನೆ