ಬೆಂಗಳೂರು : ರಾಜ್ಯದ ನೂತನ ಸಿಎಂ ಆಯ್ಕೆ ವಿಚಾರವಾಗಿ ಉಂಟಾಗಿರುವ ಗೊಂದಲ ನಿವಾರಣೆಯಾಗುವ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೆಂಬಲಿಗರು ದೇವರ ಮೊರೆ ಹೋಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೇ ಸಿಎಂ ಆಗಬೇಕು ಎಂದು ಹಾರೈಸಿ 101 ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ. ಹಿಂದೂ ಜಾಗೃತಿ ಸೇನೆಯಿಂದ ದೇವರಲ್ಲಿ ಪ್ರಾರ್ಥನೆ ಸಲ್ಲಿಕೆ ಆಗಿದೆ. ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನವನ್ನು ಗೆದ್ದು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಅರ್ಹತೆ ಪಡೆದುಕೊಂಡಿದೆ. ಆದರೆ ಅಂದಿನಿಂದ ನಿರಂತರ ಐದು ದಿನಗಳ ಕಾಲ ಸಿಎಂ ಆಯ್ಕೆ ವಿಚಾರವಾಗಿ ಹಗ್ಗ ಜಗ್ಗಾಟ ಮುಂದುವರಿದಿದ್ದು, ಮುಂದಿನ ಸಿಎಂ ತಾವೇ ಆಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಟ್ಟು ಹಿಡಿದು ಕುಳಿತಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನಾಳೆ ಪ್ರಮಾಣ ವಚನ ಸ್ವೀಕಾರ ?
ಸಿಎಂ ಸ್ಥಾನವನ್ನು ಬಿಟ್ಟುಕೊಡಲು ತಯಾರಿಲ್ಲದ ನಾಯಕರು: ಒಂದೆಡೆ ಕೆಪಿಸಿಸಿ ಅಧ್ಯಕ್ಷರು ತಮ್ಮ ಬೆಂಬಲಿಗರೊಂದಿಗೆ ತಾವೇ ಸಿಎಂ ಆಗುವುದಾಗಿ ಹೈಕಮಾಂಡ್ ಮುಂದೆ ಪ್ರಸ್ತಾಪ ಸಲ್ಲಿಸಿದರೆ, ಸಿದ್ದರಾಮಯ್ಯ ಒಂದಿಷ್ಟು ಶಾಸಕರೊಂದಿಗೆ ದೆಹಲಿಗೆ ತೆರಳಿ ತಮ್ಮ ಬಲ ಪ್ರದರ್ಶನ ಮಾಡಿದ್ದಾರೆ. ರಾಜ್ಯದ ಮುಂದಿನ ಸಿಎಂ ಆಗಿ ಆಯ್ಕೆಯಾಗಲು ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡೆಸಿರುವ ಪ್ರಯತ್ನದಿಂದ ಒಮ್ಮತ ಮೂಡಿಸಲು ಸಾಧ್ಯವಾಗದ ಹೈಕಮಾಂಡ್ ಇಬ್ಬರು ನಾಯಕರನ್ನ ದೆಹಲಿಗೆ ಕರೆಸಿಕೊಂಡು ಮನವೊಲಿಸುವ ಪ್ರಯತ್ನ ಮುಂದುವರಿಸಿದೆ. ಸತತ ಮೂರು ದಿನಗಳಿಂದ ಭರ್ಜರಿ ಕಸರತ್ತು ನಡೆಸಿದೆ. ಆದರೆ ದೆಹಲಿಗೆ ತೆರಳಿದರೂ ತಮ್ಮ ಹಠಕ್ಕೆ ಬದ್ಧವಾಗಿರುವ ಇಬ್ಬರೂ ನಾಯಕರು ಸಿಎಂ ಸ್ಥಾನವನ್ನು ಬಿಟ್ಟುಕೊಡಲು ಸಿದ್ದರಾಗಿಲ್ಲ.
ಸಿದ್ದರಾಮಯ್ಯ ಅಭಿಮಾನಿಗಳಿಂದ ಸಂಭ್ರಮ : ಒಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿಯೇ ಬಿಟ್ಟರು ಎಂಬ ರೀತಿ ಇಂದು ಅವರ ಅಭಿಮಾನಿಗಳು ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸರ್ಕಾರಿ ನಿವಾಸದ ಮುಂದೆ ಸಂಭ್ರಮಾಚರಣೆ ನಡೆಸಿದ್ದಾರೆ. ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೆಂಬಲಿಗರು ರಾಜರಾಜೇಶ್ವರಿ ದೇವಿಗೆ ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನವರು ಲಿಂಗಾಯತರಿಗೆ ಯಾವ ಹುದ್ದೆ ಕೊಡ್ತಾರೆ ನೋಡೋಣ: ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ
ಆರ್ ಆರ್ ನಗರದಲ್ಲಿರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಹಿಂದೂ ಜಾಗೃತಿ ಸೇನೆ ಅಧ್ಯಕ್ಷ ವಿನಯ್ ಗೌಡ ನೇತೃತ್ವದಲ್ಲಿ ದೇವಿಗೆ ಪ್ರಾರ್ಥನೆ ಸಲ್ಲಿಸಿ ನೂರಾರು ಜನ ಡಿ ಕೆ ಶಿವಕುಮಾರ್ ಸಿಎಂ ಆಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಿಎಂ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಾಯಕರು ಶತಾಯಗತಾಯ ಇಬ್ಬರಲ್ಲಿ ಒಬ್ಬರ ಮನವೊಲಿಕೆ ಪ್ರಯತ್ನ ನಡೆಸಿದ್ದರೆ, ಇದ್ದ ಅವರ ಬೆಂಬಲಿಗರು ತಮ್ಮದೇ ಆದ ರೀತಿಯಲ್ಲಿ ನಮ್ಮ ನಾಯಕರೇ ಸಿಎಂ ಆಗಲಿ ಎಂದು ಆಶಿಸಿ ಪೂಜೆ ಹಾಗೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಇನ್ನೂ ಬಿಚ್ಚಿಕೊಳ್ಳದ ಕಾಂಗ್ರೆಸ್ ಸಿಎಂ ಆಯ್ಕೆ ಕಗ್ಗಂಟು: ದೆಹಲಿಯಲ್ಲಿ ಮುಂದುವರಿದ ಕಸರತ್ತು