ಬೆಂಗಳೂರು: ಇಂದು ನಡೆದದ್ದು ಕೇವಲ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಅಲ್ಲ. ಇದು ಎಲ್ಲಾ ಮಹಿಳೆಯರಿಗೂ ಅನ್ವಯಿಸುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಬೆಳಗ್ಗೆ ಇಲ್ಲಿಯೇ ಬಂದು ಬ್ರೇಕ್ ಫಾಸ್ಟ್ ಮಾಡಿದೆ. ಎಲ್ಲಾ ಕಡೆ ಪ್ರತಿಭಟನೆ ಮಾಡುತ್ತೇವೆ. ಗ್ಯಾಸ್ ಇಲ್ಲದೆ ಜನ ನೋವು ಅನುಭವಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ್ದಾರೆ. ಈ ಸರ್ಕಾರಕ್ಕೆ ಮಾನಮರ್ಯಾದೆ ಇಲ್ಲ. ನಾವು ಎಲ್ಲಾ ಕಡೆ ಹೋರಾಟ ಮಾಡುತ್ತೇವೆ. ನಾಳೆ ದೇವನಹಳ್ಳಿಗೆ ಹೋಗುತ್ತಿದ್ದೇವೆ ಎಂದರು.
ತನ್ವೀರ್ ಸೇಠ್ ಬರ್ತಿದ್ದಾರೆ: ಮೈಸೂರು ಪಾಲಿಕೆ ಮೇಯರ್ ಆಯ್ಕೆ ಗೊಂದಲ ವಿವಾದ ಕುರಿತು ಪ್ರತಿಕ್ರಿಯಿಸಿ, ತನ್ವೀರ್ ಸೇಠ್ ಇವತ್ತು ಬರ್ತಿದ್ದಾರೆ, ನಿನ್ನೆ ಸಿಕ್ಕಿರಲಿಲ್ಲ. ಅವರ ವಿರುದ್ಧ ಶಿಸ್ತುಕ್ರಮವನ್ನ ತೆಗೆದುಕೊಳ್ಳುತ್ತೇವೆ. ಅವರಿಗೆ ನೋಟಿಸ್ ಕೂಡಾ ಕೊಡ್ತೇವೆ. ಯಾಕೆ, ಏನು? ಅನ್ನೋ ವಿಚಾರದಲ್ಲಿ ಗೊಂದಲವಾಗಿತ್ತು. ಮಧು ಯಕ್ಷಿಗೌಡ ವರದಿ ಕೊಟ್ಟಿದ್ದಾರೆ. ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮೇಯರ್ ಸ್ಥಾನ ಸಿಗಬೇಕಿತ್ತು. ಈ ಬಗ್ಗೆ ನಾನು ಸಿದ್ದರಾಮಯ್ಯ ಅವರು ಮಾತನಾಡಿಕೊಂಡಿದ್ವಿ ಎಂದರು.
ಸಿದ್ದರಾಮಯ್ಯ ಗೈರಿಗೆ ಸಮಜಾಯಿಷಿ: ಇಂದಿನ ಪ್ರತಿಭಟನೆ ವೇಳೆ ಸಿದ್ದರಾಮಯ್ಯ ಗೈರಾದ ವಿಚಾರ ಮಾತನಾಡಿ, ಅವರು ಸಿಎಲ್ಪಿ ಲೀಡರ್, ಅವರಿಗೆ ಸಾಕಷ್ಟು ಕೆಲಸ ಇರುತ್ತೆ. ನೀವ್ಯಾಕೆ ಎಲ್ಲವನ್ನೂ ಕ್ರಿಯೇಟ್ ಮಾಡ್ತಿದ್ದೀರಾ?. ನಾನು ಕೆಲವು ಕಡೆ ಹೋಗಿಲ್ಲ. ಹಾಗೆ ಅವರು ಕೆಲವು ಕಡೆ ಬರೋಕೆ ಆಗ್ಲಿಲ್ಲ. ಸಿದ್ದರಾಮಯ್ಯ ಬಂದಿಲ್ಲವೆಂದು ಯಾಕೆ ಆರೋಪ ಮಾಡ್ತೀರಾ? ಎಂದು ಅವರ ಗೈರಿಗೆ ಡಿಕೆಶಿ ಸಮಜಾಯಿಷಿ ನೀಡಿದರು.
ಶಿಸ್ತು ಕ್ರಮ: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಇರಬಹುದು, ಯಾರೇ ಇರಬಹುದು, ಯಾವ ಲೀಡರ್ಸ್ ವಿರುದ್ಧವೂ ಮಾತನಾಡಬಾರದು, ಆಂತರಿಕವಾಗಿ ಚರ್ಚಿಸಬೇಕೇ ವಿನಃ, ಬಹಿರಂಗವಾಗಿ ಮಾತನಾಡಬಾರದು. ನಾನು ಇದರ ಬಗ್ಗೆ ಶಿಸ್ತುಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.