ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲ ಒಂದು ವರ್ಷದ ಸಾಧನೆ ಶೂನ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋದಿ ಸರ್ಕಾರ ಎಲ್ಲಾ ರಂಗದಲ್ಲಿಯೂ ವಿಫಲವಾಗಿದೆ. ಕೈಗಾರಿಕೆ, ಕೃಷಿ, ಉತ್ಪಾದನೆ, ಆಟೋ ಮೊಬೈಲ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಯಾವುದೇ ಸಾಧನೆ ಆಗಿಲ್ಲ. ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದವರು ರೈತರನ್ನು ಮರೆತಿದ್ದಾರೆ. ಒಟ್ಟಾರೆ ಹೇಳುವುದಾದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಶೂನ್ಯ ಎಂದರು.
ಕೇಂದ್ರದ ಒಂದು ವರ್ಷದ ಆಡಳಿತ ಗಮನಿಸಿದ್ದೇವೆ. ಲೇಖನದಲ್ಲಿ ವಿಭಿನ್ನವಾದ ಅಭಿಪ್ರಾಯ ಬರೆದಿದ್ದೀರಿ. ನನ್ನ 40 ವರ್ಷದ ರಾಜಕೀಯದಲ್ಲಿ ಸ್ವಾತಂತ್ರ್ಯ ಬಂದ ಮೇಲೆ 47ರ ನಂತರ ಚಳವಳಿ ನಾವು ನೋಡಿದ್ದೇವೆ. ಸ್ವಾತಂತ್ರ್ಯ ಬಂದ ಮೇಲೆ ದೇಶವನ್ನು ಉಳಿಸುವುದಕ್ಕೆ ನಮ್ಮ ಸಂವಿಧಾನ, ಗಣರಾಜ್ಯ ದೊಡ್ಡ ಆಸ್ತಿಯಾಗಿ ಸ್ವೀಕಾರ ಮಾಡಿದ್ದೇವೆ. ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇವೆಲ್ಲಕ್ಕೂ ಬದಲಾವಣೆ ತಂದಿದ್ದು ಜನರ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ಜನರು ಬೀದಿಗೆ ಇಳಿದು ಹೋರಾಟ ಮಾಡಿದ್ದಾರೆ. ಅನೇಕ ಕಾನೂನು ತಂದು ಜನರಿಗೆ ಆತಂಕ ತಂದಿದ್ದಾರೆ. ನಾನು ಭಾರತೀಯನೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ. ಇಷ್ಟು ದೊಡ್ಡ ನಿರುದ್ಯೋಗ ಸೃಷ್ಟಿ ಆಗಿದೆ. ಯುವಕರು ಇವರನ್ನು ಅಧಿಕಾರಕ್ಕೆ ತಂದರೂ 40 ವರ್ಷದ ದಾಖಲೆ ಪ್ರಕಾರ ಈ ಬಾರಿ ಅತಿ ಕಡಿಮೆ ಇದೆ ಎಂದು ಪ್ರಕಟಸಿದ್ದಾರೆ. ಡಾಲರ್ ಮೌಲ್ಯ ಕುಸಿದಿದೆ. 76 ರೂಪಾಯಿ ಡಾಲರ್ ಬೆಲೆ ಆಗಿದೆ ಎಂದಿದ್ದಾರೆ.
ಇಂಧನ ಬೆಲೆ ಏರಿಕೆ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇದೆ. ಇಲ್ಲಿ ಟ್ಯಾಕ್ಸ್ ಹೆಚ್ಚಿಸಿದ್ದಾರೆ, ಬೇರೆ ದೇಶದಲ್ಲಿ ಟ್ಯಾಕ್ಸ್ ಕಡಿಮೆ ಮಾಡಿದ್ದಾರೆ. ಸಾಮಾನ್ಯ ಜನರಿಗೆ ಲಾಭ ಸಿಗುತ್ತಿಲ್ಲ. ಟ್ಯಾಕ್ಸ್ ಕಡಿಮೆ ಮಾಡುವುದಕ್ಕೆ ಇವರಿಗೆ ಅವಕಾಶ ಇತ್ತು. ಪ್ರತಿಯೊಂದು ಬೆಲೆ ಹೆಚ್ಚುವುದಕ್ಕೆ ಇದು ಒಂದು ಕಾರಣ. ಜಿಡಿಪಿ ಶೇ. 3.1 ಇತ್ತು. ಇಂದು ಶೇ. 0.1 ಆಗಿದೆ. ಭಾರತದ ಆರ್ಥಿಕ ವರ್ಷ ಹದಗೆಟ್ಟಿದೆ. ಸರಿಯಾದ ಆರ್ಥಿಕ ನೀತಿ ಮಾಡಿಲ್ಲ. ಆರ್ಥಿಕ ತಜ್ಞರು, ಉದ್ಯಮಿಗಳ ಮಾತು ಕೇಳುತ್ತಿಲ್ಲ. 40 ವರ್ಷದಿಂದ ದಾಖಲೆಯ ನಿರುದ್ಯೋಗ ಹೆಚ್ಚಾಗಿದೆ. ಶೇ. 24ರಷ್ಟು ನಿರುದ್ಯೋಗ ಹೆಚ್ಚಾಗಿದೆ. ಕೋವಿಡ್ ಸಂದರ್ಭದಲ್ಲಿ ಇನ್ನೂ ಹೆಚ್ಚಾಗಿದೆ ಎಂದರು.
ಕೋವಿಡ್ ಫುಲ್ ಪ್ಲಾಪ್ ಆಗಿದೆ. ಕೇಂದ್ರ, ರಾಜ್ಯ ಸರ್ಕಾರ ಏನೂ ಮಾಡಲಿಲ್ಲ. ನಾವು ಅವರಿಗೆ ಸಹಕಾರ ಕೊಟ್ಟಿದ್ದೆವು. ಅವರದು ಆ್ಯರೋಗೆಂಟ್ ಪರ್ಫಾರ್ಮಿಂಗ್ ಕಲ್ಚರ್. ನಾನು ಆಲ್ ಪಾರ್ಟಿ ಮೀಟಿಂಗ್ ಮಾಡಿ ಎಂದು ಹೇಳಿದ ಮೇಲೆ ಕರೆದ್ರು. ಸರ್ಕಾರಕ್ಕೆ ವ್ಯಾವಹಾರಿಕ ಜ್ಞಾನ ಇಲ್ಲ. ಅಧಿಕಾರಿಗಳಿಗೆ ಇಲ್ಲ. ದಿನ ಸಂಜೆ ಒಂದು ಹೇಳಿಕೆ ಬಿಡುಗಡೆ ಮಾಡಬೇಕು. ನಮ್ಮ ರಾಜ್ಯವನ್ನು ದೇವರೇ ಕಾಪಾಡಬೇಕು. ನೀವು ಮಾಧ್ಯಮಗಳಲ್ಲಿ ಪ್ರಕಟಿಸಿದ್ದೀರಾ ಅಷ್ಟೇ ಸಾಕು. ನಾವು ಮಾತಾಡಿದ್ರೆ ರಾಜಕೀಯ. ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ. ನಾವು ನಮ್ಮ ಪಕ್ಷ ಎಲ್ಲಾ ಬೇಡಿಕೆ ಇಟ್ಟಿದ್ದೆವು. ರೈತರಿಗೆ ಸಹಾಯ ಮಾಡಿ ಅಂದ್ವಿ. ಎಕರೆಗೆ 25 ಸಾವಿರ ರೂಪಾಯಿ ಅಷ್ಟೇ. ಶ್ವೇತಪತ್ರ ಹೊರಡಿಸಿ ಎಂದು ಹೇಳುತ್ರಿದ್ದೇವೆ. ಒಬ್ಬರಿಗೆ ಒಂದು ರೂಪಾಯಿ ತಲುಪಿದೆ ಎಂದು ಡಿಟೈಲ್ಸ್ ಕಳಿಸಿ. ಹಳ್ಳಿಗಳಿಗೆ ಹೋಗ್ರಿ, ಅಲ್ಲೇ ಹೋಗಿ ಹಣ ಕೊಡ್ರಿ. ಅವರು ಸತ್ತ ಮೇಲೆ ತಿಥಿಗೆ ಹಣ ಕೊಡ್ತಿರಾ? ನನಗೇ ಗೊತ್ತಿಲ್ಲ ಸೇವಾ ಸಿಂದು ಹೇಗೆ ಅಪ್ಲೋಡ್ ಮಾಡಬೇಕು ಅಂತ. ಅವರಿಗೆ ಅದು ಗೊತ್ತಿದ್ರೆ ಯಾಕೆ ಬಟ್ಟೆ ತೊಳೆಯುತ್ತಿದ್ರು. ಸಿಎಂ ಯಡಿಯೂರಪ್ಪ ಅವರೇ ನಿಮಗೆ ಸಾಮಾನ್ಯ ಜ್ಞಾನ ಇಲ್ಲವಲ್ರಿ. ಇದು ರಾಜ್ಯಕ್ಕೆ ಒಂದು ದೊಡ್ಡ ಅವಮಾನ. ರಾಜಕೀಯ ಮಾಡಿದ್ರಿ ಬಿಟ್ರೆ ಬೇರೆ ಏನೂ ಮಾಡಲಿಲ್ಲ. ವಲಸಿಗರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಅವರಿಗೆ ಸಹಾಯ ಮಾಡುವುದಕ್ಕೆ ಆಗಲಿಲ್ಲವಲ್ಲ ನಿಮಗೆ. ನೇರವಾಗಿ ಕೋರ್ಟ್ ಹೇಳಬೇಕಾಯ್ತಾ ನಿಮಗೆ. ಎಲ್ಲಾ ಮುಚ್ಚುಬಿಟ್ರಿ. ನಿಮಗೆ ಅವರ ಶಾಪ ತಟ್ಟದೆ ಇರುತ್ತಾ ಎಂದರು.
ವಲಸೆ ಕಾರ್ಮಿಕರು, ರೈತರು ತಮ್ಮ ಜಮೀನಿನಲ್ಲಿ ಕಲಸ ಮಾಡುತ್ತಿದ್ರು. ರೈತ, ಶ್ರಮಿಕ ವರ್ಗದ ಜನರಿಗೆ ಒಂದು ನ್ಯಾಯವನ್ನು ಕೊಡುವುದಕ್ಕೆ ಈ ಸರ್ಕಾರ ಚಿಂತನೆ ಮಾಡಿಲ್ಲ. ಸಣ್ಣ ಉದ್ಯಮಿಗಳ ಬಗ್ಗೆ ಅವರಿಗೆ ಯಾವುದೇ ಸಹಾಯ ಮಾಡಲಿಲ್ಲ. ಒಟ್ಟಾರೆ ಇಡೀ ದೇಶ ಯಾವ ಸಂದರ್ಭದಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಒಂದು ಕಾರ್ಯಕ್ರಮ ರೂಪಿಸಲಿಲ್ಲ. ಬುಲೆಟ್ ಟ್ರೈನ್, ಸ್ಮಾರ್ಟ್ ಸಿಟಿ ಎಲ್ಲಪ್ಪಾ? ಒಬ್ಬರಿಗೆ ಒಂದು ರೂಪಾಯಿ ದುಡ್ಡು ಕೊಡಲಿಲ್ಲ. ಎಂಪಿ, ಎಂಎಲ್ಎ ದುಡ್ಡಿನಲ್ಲಿ ಮಾಡಿಕೊಳ್ಳಿ ಎಂದು ಹೇಳುವುದಕ್ಕೆ ಇವರೇ ಬೇಕಾ? ವ್ಯಾವಹಾರಿಕ ಜ್ಞಾನ ಇರುವವನು ಅವನೇ ಮಾಡಿಕೊಳ್ಳುತ್ತಾನೆ. ನೀವು ಮಾಡುವುದು ಬೇಡ ಎಂದರು.
ಸಾಲ ಕೊಡಲು ನೀವು ಬೇಕಾ? ಸಾಲ ಕೊಡುವುದಕ್ಕೆ ನೀವೇ ಬೇಕಾ? ಪೀಣ್ಯ, ಎಲೆಕ್ಟ್ರಾನಿಕ್ ಇಂಡಸ್ಟ್ರೀಸ್ಗೆ ಹೋಗಿ ನೋಡಿ. ಎಲ್ಲಾ ನೋಟಿಸ್ ಕೊಡ್ತಿದ್ದೀರಿ. 20 ಲಕ್ಷ ಕೋಟಿ ಯಾರಿಗೆ ತಲುಪಿದೆ. ಲಾಯರ್ಗಳಿಗೆ 5 ಸಾವಿರ ತಲುಪಿದ್ಯಾ? ಮದುವೆ ಮನೆಯಲ್ಲಿ ಅಡುಗೆ ಮಾಡುವವರಿಗೆ ತಲುಪಿದ್ಯಾ? ನೀವು ಯಾರಿಗೆ ಕೊಟ್ಟಿದ್ದೀರಿ ಅಂತ ಲಿಸ್ಟ್ ಕೊಡಿ. ಇಂತಹ ಮಾರಕವಾದ ವರ್ಷದಲ್ಲಿ ಪ್ರತಿಯೊಬ್ಬರ ಬದುಕು ಶೂನ್ಯ ಆಗುವುದಕ್ಕೆ ನೀವೇ ಕಾರಣ. ಹಸಿವಿನಿಂದ ಇವತ್ತು ಸಾವಿರಾರು ಜನ ಸತ್ತಿದ್ದಾರೆ. ನಿಮಗೆ ಅಧಿಕಾರ ಮಾಡುವುದು ಗೊತ್ತಿಲ್ಲ. ರೈತನನ್ನು ಸಾಯಿಸಿದ್ದೀರಿ, ಅದಕ್ಕೆ ನೀವೇ ಕಾರಣ ಎಂದು ದೂರಿದರು.