ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕರು ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಸಮಾಲೋಚನೆ ನಡೆಸಿದರು.
ರಾಜ್ಯದ ರಾಜಕೀಯ ವಿದ್ಯಮಾನಗಳ ಜೊತೆಗೆ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೈಗೊಳ್ಳಬಹುದಾದ ಹೋರಾಟಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ವಿಧಾನ ಪರಿಷತ್ನಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಬಿಜೆಪಿ ಕೈಗೊಂಡಿದ್ದು, ಇದರಲ್ಲಿ ಯಾವ ರೀತಿಯ ಫಲಿತಾಂಶ ಲಭಿಸಬಹುದು ಎಂಬ ಕುರಿತು ಡಿಕೆಶಿ ನಾಯಕರ ಜೊತೆ ಚರ್ಚಿಸಿದರು. ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ಸುದೀರ್ಘ ಚರ್ಚೆ ನಡೆಸಿದರು.
ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಹಾಗೂ ಕೈಗೊಳ್ಳಬಹುದಾದ ತಂತ್ರಗಾರಿಕೆ ಕುರಿತು ಶಿವಕುಮಾರ್ ಹಿರಿಯ ನಾಯಕರ ಜೊತೆ ಈ ಸಂದರ್ಭ ಚಿಂತನ-ಮಂಥನ ನಡೆಸಿದರು.
ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಸದಸ್ಯರ ಕಳೆದುಕೊಳ್ಳುತ್ತಿದೆ. ವಿಧಾನಸಭೆ ಉಪಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆಗಳಲ್ಲಿ ದೊಡ್ಡಮಟ್ಟದ ಹಿನ್ನಡೆ ಆಗಿದೆ. ಈ ಎಲ್ಲಾ ಘಟನೆಗಳು ಪಕ್ಷವನ್ನ ಸಾಕಷ್ಟು ಒತ್ತಡಕ್ಕೆ ಸಿಲುಕಿಸಿದ್ದು ಮುಂಬರುವ ದಿನಗಳಲ್ಲಿ ಪಕ್ಷ ಮರು ಸಂಘಟಿಸುವ ಹಾಗೂ ಕೇಡರ್ ಮಟ್ಟದಲ್ಲಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಬಲವಾದ ನಿರ್ಧಾರಗಳ ಕುರಿತು ಈ ಸಂದರ್ಭ ಗಂಭೀರ ಚರ್ಚೆ ನಡೆಯಿತು.
ಒಟ್ಟಾರೆ ಇಂದು ದಿನವಿಡಿ ನಿವಾಸದಲ್ಲೇ ಇದ್ದ ಡಿಕೆಶಿ ವಿವಿಧ ನಾಯಕರ ಜೊತೆ ಸುದೀರ್ಘ ಚರ್ಚೆ ನಡೆಸಿ ಹಲವು ವಿಚಾರಗಳ ಕುರಿತು ಮಾಹಿತಿ ಕಲೆಹಾಕಿದರು.