ಬೆಂಗಳೂರು : ಡಿ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪ್ರಮುಖ ಆರೋಪಿಯನ್ನ ಬಂಧನ ಮಾಡುವಲ್ಲಿ ಡಿ.ಜೆ ಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಾಜಿದ್ ಬಂಧಿತ ಆರೋಪಿ. ಈತನ ಕುಮ್ಮಕ್ಕಿನಿಂದ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ನಡೆದಿತ್ತು. ಇನ್ನು ಈತ ನವೀನ್ ಹಾಕಿದ ಸಾಮಾಜಿಕ ಜಾಲತಾಣದ ಪೋಸ್ಟ್ ಸಂಬಂಧ ಡಿ.ಜೆ ಹಳ್ಳಿ ಠಾಣೆಗೆ ದೂರು ನೀಡಲು ಬಂದಿದ್ದ.
ಈ ವೇಳೆ, ಡಿ.ಜೆ ಹಳ್ಳಿ ಠಾಣೆ ಇನ್ಸ್ಪೆಕ್ಟರ್ ಏಕಾ ಏಕಿ ಬಂಧನ ಮಾಡಲು ಸಾಧ್ಯವಿಲ್ಲ. ಎರಡು ಗಂಟೆ ಸಮಯ ಕೊಡಿ, ಪರಿಶೀಲನೆ ಮಾಡಿ ಬಂಧನ ಮಾಡಲಾಗುವುದು ಎಂದಿದ್ದಾರೆ. ಈ ವೇಳೆ, ಆರೋಪಿ ಎರಡು ಗಂಟೆ ಯಾಕೆ ಬೇಕು. ನಮ್ಮವರು ಆದರೆ 5 ಸೆಕೆಂಡ್ನಲ್ಲಿ ಬಂಧನ ಮಾಡುತ್ತೀರಿ ಎಂದು ವಾದ ಮಾಡಿದ್ದ. ದೂರು ನೀಡಿದ ನಂತರ ದೂರು ಪರಿಶೀಲನೆ ಮಾಡಿ ಎಫ್ ಐ ಅರ್ ದಾಖಲು ಮಾಡಲು ಎರಡು ಗಂಟೆ ಬೇಕು ಎಂದಿದ್ದರು ಪೊಲೀಸರು. ಆದರೆ ವಾಜಿದ್ ಪೊಲೀಸರ ಮಾತು ಕೇಳಲು ರೆಡಿ ಇರಲಿಲ್ಲ. ಬದಲಾಗಿ ಗಲಭೆ ಎಬ್ಬಿಸಿದ್ದ.
ಇನ್ನು ಈತ ಕರ್ನಾಟಕ ಟಿಪ್ಪು ಟೈಗರ್ ಅಲ್ಪತ್ ಟ್ರಸ್ಟ್ ಅಧ್ಯಕ್ಷನಾಗಿದ್ದು, ಜೆಡಿಎಸ್ನಲ್ಲೂ ಕೂಡ ಗುರುತಿಸಿಕೊಂಡಿದ್ದ. ಹಾಗೆ ಘಟನೆ ನಡೆಯುವ ಕೆಲ ದಿನಗಳ ಮುನ್ನ ಅಖಂಡ ಶ್ರೀನಿವಾಸ್ ಕಾಣೆಯಾಗಿದ್ದಾನೆ ಎಂದು ಪೋಸ್ಟ್ ಕೂಡಾ ಮಾಡಿದ್ದ. ಈ ಪೋಸ್ಟ್ ಸಂಬಂಧ ಅಖಂಡ ಶ್ರೀನಿವಾಸ ಬೆಂಬಲಿಗರು ಈತನ ವಿರುದ್ಧ ದೂರು ನೀಡಿದ್ದರು. ದೂರಿನ ನಂತರ ಡಿ.ಜೆ ಹಳ್ಳಿ ಪೊಲೀಸರು ಠಾಣೆಯಲ್ಲಿ ರಾಜಿ ಮಾಡಿಸಿ ಬುದ್ದಿ ಹೇಳಿ ಕಳುಹಿಸಿದ್ದರು.
ಸದ್ಯ ಈ ಘಟನೆಯಲ್ಲಿ ವಾಜಿದ್ ಕೈವಾಡ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು, ಈತನ ಆದೇಶದ ಮೇರೆಗೆ ನೂರಾರು ಯುವಕರು ಆಗಮಿಸಿ ಗಲಾಟೆಯಲ್ಲಿ ಭಾಗಿಯಾಗಿದ್ದರು ಎಂಬುದನ್ನ ಪೊಲೀಸರು ಪತ್ತೆ ಹಚ್ಚಿದ್ದರು. ಖಚಿತ ಸಾಕ್ಷ್ಯ ಸಂಗ್ರಹಿಸಿ ಈಗ ವಾಜಿದ್ನನ್ನು ಬಂಧಿಸಿದ್ದಾರೆ. ಈತನ ಬಂಧನದ ಬೆನ್ನಲ್ಲೇ ಆತನ ಬೆಂಬಲಿಗರಲ್ಲಿ ನಡುಕ ಶುರುವಾಗಿದೆ.