ಬೆಂಗಳೂರು: ಮೂತ್ರಪಿಂಡ ರೋಗವು ಸದ್ದಿಲ್ಲದೇ ಕೊಲ್ಲುವ ರೋಗವಾಗಿದೆ. ದೇಶಾದ್ಯಂತ ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಮೂತ್ರಪಿಂಡದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ.
ಮಾರ್ಚ್ 12 ರಂದು ವಿಶ್ವ ಕಿಡ್ನಿ ದಿನವನ್ನಾಗಿ ಆಚರಿಸಲಾಗುತ್ತೆ. ಇದರ ಅಂಗವಾಗಿ ಬೆಂಗಳೂರಿನಲ್ಲಿ ಮಣಿಪಾಲ್ ಹಾಸ್ಪಿಟಲ್ಸ್ ಜನರಲ್ಲಿ ಜಾಗೃತಿ ಮೂಡಿಸಲು ಇಂದು ಸೈಕ್ಲೋಥಾನ್ ನಡೆಸಿತು. ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ. ಎಚ್. ಸುದರ್ಶನ್ ಬಲ್ಲಾಳ್ ಸೈಕ್ಲೋಥಾನ್ಗೆ ಚಾಲನೆ ನೀಡಿದರು.
ಹಳೆ ವಿಮಾನ ನಿಲ್ದಾಣ ರಸ್ತೆ, ಮಿಲ್ಲರ್ಸ್ ರಸ್ತೆ, ಹೆಬ್ಬಾಳ, ಯಶವಂತಪುರ, ಮಲ್ಲೇಶ್ವರಂ, ಜಯನಗರ, ಸರ್ಜಾಪುರ ರಸ್ತೆ, ವರ್ತೂರು ರಸ್ತೆ ಮತ್ತು ವೈಟ್‍ಫೀಲ್ಡ್ ಸೇರಿದಂತೆ ನಗರದ ಮಣಿಪಾಲ್ ಆಸ್ಪತ್ರೆಗಳ 10 ಕೇಂದ್ರಗಳ ಉದ್ದಕ್ಕೂ ಈ ಸೈಕ್ಲೋಥಾನ್ ನಡೆಸಲಾಯಿತು. ವೃತ್ತಿನಿರತ ಸೈಕ್ಲಿಸ್ಟ್ಗಳು, ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಭಾಗಿಯಾಗಿದ್ದರು.
ಪ್ರತಿಯೊಬ್ಬರೂ ಆರೋಗ್ಯಕರ ಜೀವನಶೈಲಿಗಾಗಿ ಶ್ರಮ ಕೈಗೊಳ್ಳುವ ಅಗತ್ಯವನ್ನು ಎತ್ತಿ ತೋರಿಸುವ ಪ್ರಯತ್ನವಾಗಿದ್ದು, ಈ ಗುರಿಯನ್ನು ಸಾಧಿಸಲು ಸೈಕ್ಲಿಂಗ್ ಒಂದು ಉತ್ತಮ ಮಾರ್ಗವಾಗಿದೆ ಅಂತ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಆಸ್ಪತ್ರೆಯಲ್ಲಿ 507 ಮೂತ್ರಪಿಂಡ ಕಸಿ, ದಿನಕ್ಕೆ 342 ಡಯಾಲಿಸಿಸ್, ತಿಂಗಳಿಗೆ 9,460 ಡಯಾಲಿಸಿಸ್ ಪ್ರಕರಣಗಳನ್ನು ನಡೆಸಿದೆ. ಅಲ್ಲದೇ ಪ್ರಸ್ತುತ ಡಯಾಲಿಸಿಸ್‍ಗೆ ಒಳಗಾಗುತ್ತಿರುವ 957 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಮೃತ ದೇಹದಿಂದ ತೆಗೆದ ಮೂತ್ರಪಿಂಡ ಕಸಿ, ರೋಬೋಟಿಕ್ ಮೂತ್ರಪಿಂಡ ಕಸಿ, ಸಿಂಗಲ್-ಇನ್ಸಿಶನ್ ಡೋನರ್ ನೆಫ್ರೆಕ್ಟಮಿ, ಲ್ಯಾಪರೊಸ್ಕೋಪಿಕ್ ಡೋನರ್ ನೆಫ್ರೆಕ್ಟಮಿ(ದಾನಿಗಳಿಂದ ಪಡೆದ ಮೂತ್ರಪಿಂಡಗಳನ್ನ ಬಳಸಿ ಉದರದರ್ಶಕ ಶಸ್ತ್ರಚಿಕಿತ್ಸೆ) (ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸೆ) ಮತ್ತು ಟ್ರಾನ್ಸ್ ವೆಜಿನಲ್ ಡೋನರ್ ನೆಫ್ರೆಕ್ಟಮಿಯನ್ನು ಯಶಸ್ವಿಯಾಗಿ ಕೈಗೊಂಡ ಮೊದಲ ಘಟಕವಾಗಿದೆ ಅಂದರು.
ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಮುಖ್ಯವಾಗಿರುತ್ತದೆ. ವಿಶ್ವ ಮೂತ್ರಪಿಂಡ ದಿನದಂದು, ಮೂತ್ರಪಿಂಡದ ಆರೈಕೆಯ ಸಾರವನ್ನು ಸೂಚಿಸುವ ಸೈಕ್ಲೋಥಾನ್‍ನ ಭಾಗಿಯಾಗಲು ಸಂತಸವಿದೆ. ಮೂತ್ರಪಿಂಡ ಸಮಸ್ಯೆ ಇರುವವರು ಆರಂಭಿಕ ಹಂತದಲ್ಲಿ ವೈದ್ಯಕೀಯ ಸಹಾಯ ಪಡೆಯುವಂತೆ ಸಲಹೆ ನೀಡಿದರು.