ಬೆಂಗಳೂರು: ಇಂದು ಕರಾವಳಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ 11 ಸೆಂ.ಮೀ, ಮಂಗಳೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ವಿಭಾಗದ ನಿರ್ದೇಶಕ ಸಿ. ಎಸ್. ಪಾಟೀಲ್ ತಿಳಿಸಿದರು.
ಬಂಗಾಳ ಉಪಸಾಗರದ ಅಂಡಮಾನ್ ಬಳಿ ವಾಯುಭಾರ ಕುಸಿತ ಉಂಟಾಗಿದ್ದು, ಅಕ್ಟೋಬರ್ ನಾಳೆ ವೇಳೆಗೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಆನಂತರ ಪಶ್ಚಿಮ ದಿಕ್ಕಿನ ಕಡೆಗೆ ಚಲಿಸಿ ಉತ್ತರ ಆಂಧ್ರಪ್ರದೇಶದ ಕರಾವಳಿಯಲ್ಲಿ ಅ.12 ನೇ ತಾರೀಕಿಗೆ ಹಾದುಹೋಗಲಿದೆ. ಇದರ ಪ್ರಭಾವದಿಂದ ಅ. 9 ರಿಂದ 12 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಎಲ್ಲಾ ಕಡೆ ಮಳೆಯಾಗಲಿದ್ದು, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಅ.11ರಂದು ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಉತ್ತರ ಒಳನಾಡಿನಲ್ಲಿ ಅ.9 ಹಾಗೂ 13 ರಂದು ಅಲ್ಲಲ್ಲಿ ಮಳೆಯಾಗಬಹುದು. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ವಿಜಯಪುರ ಸೇರಿ ಕೆಲವು ಕಡೆ ಅ.10 ರಿಂದ 12 ರವರೆಗೆ ಮಳೆ ಪ್ರಮಾಣ ಏರಿಕೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್ 9 ರಿಂದ 13ರವರೆಗೆ ಕೆಲವು ಕಡೆ ಮಳೆಯಾಗಲಿದೆ ಎಂದು ಪಾಟೀಲ್ ತಿಳಿಸಿದರು.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ-ತುಂತುರು ಮಳೆ:
ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ತಂತುರು ಮಳೆಯಾಗುತ್ತಿದೆ. ಇಂದು ಮತ್ತು ನಾಳೆ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದು ಸಿ. ಎಸ್. ಪಾಟೀಲ್ ಹೇಳಿದರು