ಬೆಂಗಳೂರು: ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆ ಕಲೆಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮಾತನಾಡಿ, ಸಿನಿಮಾದಲ್ಲಿ ಜಾನಪದ ಕಲೆಗೆ ಅಪಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ನಮ್ಮ ರಾಜ್ಯದ ದೇಶದ ಜಾನಪದ ಕಲೆಯನ್ನು ಎಲ್ಲರೂ ಗೌರವಿಸಬೇಕು. ಮನರಂಜನೆ ಹೆಸರಿನಲ್ಲಿ ಸಂಸ್ಕೃತಿ ಮತ್ತು ಜಾನಪದ ಕಲೆಗೆ ಅಪಮಾನ ಸರಿಯಲ್ಲ ಎಂದರು.
ಗುರುವಾರ ಬೆಳಗ್ಗೆ ಕಂಠೀರವ ಕ್ರೀಡಾಂಗಣದಲ್ಲಿ ಜರುಗಲಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮದ ಸಿದ್ಧತೆಯನ್ನು ಸಚಿವರು ವೀಕ್ಷಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೂಡಲೇ ಚಿತ್ರತಂಡ ಜಾನಪದಕ್ಕೆ ಅಪಮಾನವಾದ ದೃಶ್ಯಗಳನ್ನು ತೆಗೆದು ಮರು ಚಿತ್ರೀಕರಣ ಮಾಡಬೇಕು. ಕಲೆಗೆ ಅಪಮಾನವಾಗದಂತೆ ಚಿತ್ರತಂಡ ಮತ್ತು ಸಮಾಜ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.
ಸಂಭ್ರಮದಿಂದ ರಾಜ್ಯೋತ್ಸವ ಆಚರಣೆ: ಕೋಟಿ ಕಂಠ ಗಾಯನ ಕಾರ್ಯಕ್ರಮದ ಕುರಿತು ಮಾತನಾಡಿ, 1 ಕೋಟಿಗೂ ಹೆಚ್ಚು ಜನ ಕನ್ನಡದ ಆರು ಹಾಡುಗಳನ್ನು ಹಾಡಲಿದ್ದಾರೆ. ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಬೇಕು ಎಂದು ತಯಾರಿ ನಡೆಸಿದ್ದೇವೆ. ನಾಳೆ ವಿಶ್ವದದ್ಯಾಂತ ಕನ್ನಡದ ಕೋಟಿ ಕಂಠಗಾಯನ ನಡೆಯುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕರಗ ಬಗ್ಗೆ ಅವಹೇಳನಕಾರಿ ಪದ ಬಳಕೆ ಆರೋಪ: 'ಹೆಡ್ ಬುಷ್' ವಿರುದ್ಧ ದೂರು
ಈಗಾಗಲೆ 1 ಕೋಟಿ 15 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದಾರೆ. 10 ಸಾವಿರಕ್ಕೂ ಹೆಚ್ಚು ಸ್ಥಳದಲ್ಲಿ ಏಕ ಕಾಲಕ್ಕೆ ಕಾರ್ಯಕ್ರಮ ನಡೆಯುತ್ತದೆ. ಪ್ರಮುಖವಾಗಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಗರದಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. 50 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೇ. ನೆಲ ಜಲ ಆಕಾಶ ಹೀಗೆ ಎಲ್ಲೆಡೆಯಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದರು.