ದೇವನಹಳ್ಳಿ: ಕಳೆದ ಎರಡು ದಿನಗಳ ಕಾರ್ಯಾಚರಣೆಯಲ್ಲಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಮೂವರು ಪ್ರಯಾಣಿಕರಿಂದ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಒಂದು ಕೋಟಿ ಮೌಲ್ಯದ 1.7 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಸಿಂಗಾಪುರ ಏರ್ಲೈನ್ಸ್ನ ಎಸ್ ಕ್ಯೂ-510 ವಿಮಾನದಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ತಪಾಸಣೆ ನಡೆಸಿ ವಿಚಾರಣೆ ನಡೆಸಿದ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಚಿನ್ನ ಸಾಗಣಿಕೆಯ ಯತ್ನವನ್ನ ಬಯಲಿಗೆಳೆದಿದ್ದಾರೆ. ಆರೋಪಿ ಶೂ ಮತ್ತು ಪ್ಯಾಂಟ್ನಲ್ಲಿ ಮರೆಮಾಚಿ ಚಿನ್ನವನ್ನ ಸಾಗಿಸುತ್ತಿದ್ದ, ಮತ್ತು 4 ಲ್ಯಾಪ್ ಟ್ಯಾಪ್ಗಳ ಕಳ್ಳ ಸಾಗಣಿಕೆ ಸಹ ಮಾಡುತ್ತಿದ್ದ, ಆರೋಪಿಯಿಂದ 0.945 ಕೆಜಿ ಚಿನ್ನವನ್ನ ಜಪ್ತಿ ಮಾಡಲಾಗಿದೆ.
ಮತ್ತೊಬ್ಬ ಭಾರತೀಯ ಪ್ರಯಾಣಿಕ ಕುವೈತ್ ನಿಂದ ಜಜೀರಾ ಏರ್ಲೈನ್ಸ್ನಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ತಪಾಸಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯಿಂದ 689.95 ಗ್ರಾಂ ಚಿನ್ನವನ್ನ ಜಪ್ತಿ ಮಾಡಿದ್ದಾರೆ. ಶ್ರೀಲಂಕಾ ಪ್ರಯಾಣಿಕನೊಬ್ಬ ಶ್ರೀಲಂಕಾ ಏರ್ಲೈನ್ಸ್ ಮೂಲಕ ಕೆಐಎಎಲ್ಗೆ ಬಂದಿಳಿದಿದ್ದು, ಆತನನ್ನು ತಪಾಸಣೆ ನಡೆಸಿದ್ದಾಗ ಆತ ತನ್ನ ಒಳ ಉಡುಪಿನಲ್ಲಿ 103.33 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು ಬೆಳಕಿಗೆ ಬಂದಿದೆ.
ಇತ್ತೀಚಿನ ಪ್ರಕರಣ- ಮಂಗಳೂರಲ್ಲಿ 1.254 ಗ್ರಾಂ ಚಿನ್ನ ವಶ: ಕಳೆದ ಮೂರು ದಿನಗಳ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರು ಅಕ್ರಮವಾಗಿ ಸಾಗಿಸುತ್ತಿದ್ದ 1,254 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ ಪಡೆದಿದ್ದರು. ಮೊದಲಿಗೆ ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನ IX 816 ಮೂಲಕ ಅಬುಧಾಬಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕನನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದ್ದರು.
ಈ ವೇಳೆ ಆತನ ಬಳಿ 1,053 ಗ್ರಾಂ ಚಿನ್ನದ ಪೇಸ್ಟ್ ಪತ್ತೆಯಾಗಿತ್ತು. ಇದರ ಮೌಲ್ಯ 61.6 ಲಕ್ಷ ರೂಪಾಯಿ. ಈತ ನಾಲ್ಕು ಅಂಡಾಕಾರದ ವಸ್ತುಗಳಲ್ಲಿ ಚಿನ್ನವನ್ನು ಇರಿಸಿದ್ದ. ಆ ನಾಲ್ಕು ವಸ್ತುಗಳನ್ನು ಆತನ ಗುದನಾಳದಲ್ಲಿ ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಿಸಿರುವುದು ಪತ್ತೆಯಾಗಿತ್ತು. ಮತ್ತೊಬ್ಬ ಪ್ರಯಾಣಿಕ ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನ IX384 ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಬ್ಯಾಗ್ನಲ್ಲಿ ಹೊದಿಕೆಯೊಳಗೆ ಇರಿಸಲಾದ ಡಬಲ್ ಲೇಯರ್ಡ್ ಬಟ್ಟೆಯಲ್ಲಿ ಬಚ್ಚಿಡಲಾಗಿದ್ದ 201 ಗ್ರಾಂ ಚಿನ್ನದ ಪೇಸ್ಟ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ಸಮುದ್ರ, ವಿಮಾನದ ಮೂಲಕ ಚಿನ್ನ ಕಳ್ಳ ಸಾಗಣೆ.. 12 ಕೋಟಿ ಮೌಲ್ಯದ ಬಂಗಾರ ವಶ!