ಬೆಂಗಳೂರು: ಸಾಮಾನ್ಯವಾಗಿ ರಾಪಿಡೋ ಸೇರಿದಂತೆ ವಿವಿಧ ಟ್ಯಾಕ್ಸಿ ಕಂಪನಿಗಳ ವಿರುದ್ಧ ಒಂದಲ್ಲಾ ಒಂದು ರೀತಿಯಲ್ಲಿ ಗ್ರಾಹಕರು ತಮಗೆ ಆಗಿರುವ ಅನ್ಯಾಯಗಳ ಬಗ್ಗೆ ದೂರು ನೀಡಿರುವ ಬಗ್ಗೆ ಕೇಳಿರುತ್ತೀರಿ... ಆದರೆ ರಾಪಿಡೊ ಟ್ಯಾಕ್ಸಿ ಚಾಲಕನಿಗೆ ಗ್ರಾಹಕನು ಹಣ ಕೊಡುತ್ತೇನೆ ಎಂದು ವಂಚಿಸಿ ಎಸ್ಕೇಪ್ ಆಗಿರುವ ಘಟನೆ ನಗರದಲ್ಲಿ ಜರುಗಿದೆ.
ರಾಪಿಡೊ ಟ್ಯಾಕ್ಸಿ ಬುಕ್ ಮಾಡಿದ್ದ ಗ್ರಾಹಕನೊಬ್ಬ ತನಗೆ 4 ಸಾವಿರ ಹಣ ಹಾಕಿಸಿಕೊಂಡು ಬಳಿಕ ನಕಲಿ ಮೆಸೇಜ್ ಕಳುಹಿಸಿ ವಂಚಿಸಿದ್ದಾನೆ ಎಂದು ಆರೋಪಿಸಿ ರಾಪಿಡೊ ಚಾಲಕ ಮಣಿಕಂಠ ಎಂಬುವರು ಮೈಕೊ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರು ನಗರ ಪೊಲೀಸ್ ಟ್ವೀಟರ್ ಖಾತೆಗೂ ಅದನ್ನೂ ಟ್ಯಾಗ್ ಮಾಡಿದ್ದಾರೆ.
ಆಂಧ್ರ ಮೂಲದ ಬಿಟಿಎಂ ಲೇಔಟ್ ನಿವಾಸಿ ಮಣಿಕಂಠ ಅವರು ರಾಪಿಡೊ ಚಾಲಕನಾಗಿದ್ದು,ನಿನ್ನೆ ರಾತ್ರಿ ಅರಕೆರೆ ಬಳಿಯ ಅಪೊಲೊ ಆಸ್ಪತ್ರೆ ಬಳಿ ಗ್ರಾಹಕ ರಣವೀರ್ ಎಂಬಾತ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದ. ಬೈಕ್ ಹತ್ತುವ ಮುನ್ನ ರಣವೀರ್ ನನ್ನ ಪತ್ನಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು ಮಾಡಿದ್ದು, ಬಿಲ್ ಪಾವತಿಸಬೇಕಿದೆ. ತನ್ನ ಹೆಂಡ್ತಿ ಬಳಿ ಪೋನ್ ಪೇ ಇಲ್ಲ. ಹೀಗಾಗಿ ವೈದ್ಯರ ಮೊಬೈಲ್ ನಂಬರ್ಗೆ 4 ಸಾವಿರ ಹಣ ಕಳುಹಿಸಿ ಅನಂತರ ತಾನು ಹಣ ನೀಡುತ್ತೇನೆ ಎಂದು ಹೇಳಿದ್ದ.
ಗ್ರಾಹಕನ ಸ್ಥಿತಿ ಕಂಡು ಮರುಗಿದ ಮಣಿಕಂಠ ತಕ್ಷಣ ಹಣ ಪಾವತಿಸಿದ್ದಾನೆ. ಕೆಲ ಸಮಯದ ಬಳಿಕ ಮಣಿಕಂಠನಿಗೆ ಹಣ ಕಳುಹಿಸಿರುವ ಬಗ್ಗೆ ಗ್ರಾಹಕನಿಂದ ಮೆಸೇಜ್ ಬಂದಿದೆ. ಕೆಲ ಸಮಯದ ಬಳಿಕ ರಣವೀರ್ ಪೋನ್ ಮಾಡಿ ಮತ್ತೆ 5 ಸಾವಿರ ಹಣ ಕಳುಹಿಸುವುದಾಗಿ ಹೇಳಿದ್ದಾನೆ. ಅನುಮಾನಗೊಂಡು ಬ್ಯಾಂಕ್ ಖಾತೆಯಲ್ಲಿ ಪರಿಶೀಲಿಸಿದಾಗ ಹಣ ಜಮೆಯಾಗದಿರುವುದು ಗೊತ್ತಾಗಿದೆ. ಬಂದಿರುವ ಮೆಸೇಜ್ ನಕಲಿ ಎಂದು ತಡವಾಗಿ ಅರಿವಾಗಿದೆ. ಪೋನ್ ಮಾಡಿದರೆ ನಂಬರ್ ಬ್ಲ್ಯಾಕ್ ಮಾಡಿದ್ದಾನೆ. ಈ ಸಂಬಂಧ ಮೈಕೊ ಲೇಔಟ್ ಪೊಲೀಸ್ ಠಾಣೆಯಲ್ಲಿ ರಾಪಿಡೋ ಚಾಲಕ ಮಣಿಕಂಠ ದೂರು ದಾಖಲಿಸಿದ್ದಾರೆ.
ಬಿಟಿಎಂ ಲೇಔಟ್ ನಿವಾಸಿ ಮಣಿಕಂಠ ಮೂಲತಃ ಆಂಧ್ರಪ್ರದೇಶದವರಾಗಿದ್ದು ಎಂಟೆಕ್ ಪದವೀಧರನಾಗಿದ್ದಾರೆ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಒಂದು ವರ್ಷವಾಗಿದೆ. ಕೆಲಸ ಸಿಗದ ಪರಿಣಾಮ ಪಾರ್ಟ್ ಟೈಮ್ ಆಗಿ ಕಳೆದೊಂದು ವರ್ಷದಿಂದ ರಾಪಿಡೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.
ವಂಚನೆ ಬಗ್ಗೆ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಮಣಿಕಂಠ , ಗ್ರಾಹಕ ರಣವೀರ್ ಎಂದು ಪರಿಚಯಿಸಿಕೊಂಡು, ಹೆಂಡ್ತಿಗೆ ಹುಷಾರಿಲ್ಲ. ಆಸ್ಪತ್ರೆಗೆ ಸೇರಿಸಿದ್ದು ಬಿಲ್ ಪಾವತಿಸಲು ಹಣ ಬೇಕಿದೆ ಎಂದು ಆನ್ ಲೈನ್ ಮೂಲಕ ಹಣ ಹಾಕಿಸಿಕೊಂಡು ವಂಚಿಸಿದ್ದಾನೆ. ಒಂದು ವಾರದಿಂದ ಸಂಪಾದಿಸಿ, ಬ್ಯಾಂಕ್ನಲ್ಲಿ ಉಳಿತಾಯ ಮಾಡಿದ್ದ 4 ಸಾವಿರ ರೂಪಾಯಿ ಎಗರಿಸಿದ್ದಾನೆ. ಸದ್ಯ ಮೈಕೊ ಲೇಔಟ್ ಪೊಲೀಸ್ ಠಾಣೆ ಪೊಲೀಸರಿಗೆ ದೂರು ನೀಡಿದ್ದೇನೆ. ಅಪರಾಧ ಸ್ವರೂಪ ಐಟಿ ಕಾಯ್ದೆಗೆ ಬರುವುದರಿಂದ ಪೊಲೀಸರು ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ ಎಂದು ಮಣಿಕಂಠ ತಿಳಿಸಿದ್ದಾರೆ.
ಇದನ್ನೂಓದಿ: ಚಲಿಸುತ್ತಿದ್ದ ಬೈಕ್ಗೆ ಲಾರಿ ಡಿಕ್ಕಿ.. ಒಂದೇ ಕುಟುಂಬದ ಮೂವರ ದುರ್ಮರಣ