ಬೆಂಗಳೂರು: ಡ್ರಗ್ಸ್ ಜಾಲ ನಂಟು ಆರೋಪದಲ್ಲಿ ಬಂಧಿತಳಾದಾಗಿನಿಂದ, ನನ್ನ ಹಿಂದೆ ಬರಬೇಡಿ, ನನ್ನನ ಜೈಲು ಸೇರಿಸ್ತಿರಾ..? ನಾನು ವೈದ್ಯಕೀಯ ಪರೀಕ್ಷೆಗೆ ಒಪ್ಪಲ್ಲ. ನನ್ನ ಕೆರಿಯರ್ ಹಾಳಾಯ್ತು.. ನನಗೆ ಹುಷಾರಿಲ್ಲ. ಸಾಹೇಬ್ರೆ ನನಗೆ ದೋಖಾ ಮಾಡ್ತಿದ್ದೀರಾ.. ಹೀಗೆ ಹೇಳುತ್ತಲೇ ಇರುವ ನಟಿ ಸಂಜನಾ ಗಲ್ರಾನಿಯ ಮುಖವಾಡ ತನಿಖೆ ವೇಳೆ ಒಂದೊಂದಾಗಿ ಬಯಲಾಗ್ತಿದೆ.
ಪಂಜಾಬ್ ಮೂಲದ ಸಂಜನಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಾವುದೇ ಚಿತ್ರಗಳನ್ನು ಮಾಡದಿದ್ದರೂ, ಈಕೆ ಮಾತ್ರ ಕೋಟಿ ಕೋಟಿ ಆಸ್ತಿಗೆ ಒಡತಿ. ಡ್ರಗ್ಸ್ ಜಾಲ ನಂಟು ಆರೋಪ ಪ್ರಕರಣದಲ್ಲಿ ಸಿಸಿಬಿ ಬಲೆಗೆ ಬಿದ್ದ ಮೇಲೆ ಆರಂಭದಲ್ಲಿ ಕಿರಿಕ್ ಮಾಡ್ತಿದ್ದ ಸಂಜನಾ, ಪೊಲೀಸರು ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಲು ಶುರು ಮಾಡಿದ ಮೇಲೆ ಮೌನಕ್ಕೆ ಜಾರಿದ್ದಾಳೆ ಎನ್ನಲಾಗ್ತಿದೆ.
ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎಂದೇ ಪರಿಗಣಿಸಲಾಗಿರುವ ಸಂಜನಾಳ ಮೊಬೈಲ್ ಫೋನ್ ರಿಟ್ರೈವ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸಂಜನಾ ಮತ್ತು ಆಕೆಯ ಆಪ್ತ ಶೇಖ್ ಫಾಝಿಲ್ ನಡುವಿನ ಲಿಂಕ್ ಬಯಲಾಗಿದೆ. ಸಂಜನಾ ಮನೆಗೆ ಸಿಸಿಬಿ ದಾಳಿ ನಡೆಸಿದ ದಿನ ಬೆಳಗ್ಗೆ ಫಾಝಿಲ್ಗೆ ಕರೆ ಮಾಡಿದ್ದ ಸಂಜನಾ, ಯಾವುದೇ ಕ್ಷಣದಲ್ಲಿ ಸಿಸಿಬಿ ಅಧಿಕಾರಿಗಳು ತನ್ನ ಮನೆ ಮೇಲೆ ದಾಳಿ ನಡೆಸಿ ಬಂಧಿಸಬಹುದು ಎಂದು ಮುನ್ಸೂಚನೆ ಕೊಟ್ಟಿದ್ದಳು ಎಂಬ ವಿಚಾರ ಬಯಲಾಗಿದೆ. ಸಂಜನಾ ಮಾಹಿತಿ ನೀಡಿದ ಬಳಿಕ ಫಾಝಿಲ್ ತಲೆಮರೆಸಿಕೊಂಡಿದ್ದಾನೆ.
ಡ್ರಗ್ಸ್ ಜಾಲ ನಂಟು ಆರೋಪ ಪ್ರಕರಣದಲ್ಲಿ ಮೊದಲು ಬಂಧಿತಳಾಗಿರುವ ನಟಿ ರಾಗಿಣಿಗಿಂತ ಸಂಜನಾಳ ನಂಟು ಬಹಳಷ್ಟು ದೊಡ್ಡದಿದೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಗೊತ್ತಾಗಿದೆ. ಈಕೆಗೆ ದೊಡ್ಡ ದೊಡ್ಡ ಡ್ರಗ್ ಪೆಡ್ಲರ್ಗಳ ಜೊತೆಗಿದ್ದ ಸಂಪರ್ಕದ ಬಗ್ಗೆಯೂ ಸಿಸಿಬಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಇಂದು ಸಂಜನಾ ಕಸ್ಟಡಿ ಅಂತ್ಯವಾಗಲಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆಯಲು ಸಿಸಿಬಿ ಸಿದ್ಧತೆ ನಡೆಸಿದೆ. ಸಂಜನಾ ಮತ್ತೆ ಸಿಸಿಬಿ ಕಸ್ಟಡಿಗೆ ಸಿಕ್ಕರೆ, ಆಕೆಯ ಕೋಟಿ ಕೋಟಿ ಆಸ್ತಿಯ ಹಿನ್ನೆಲೆ ಜಾಲಾಡಲು ಅಧಿಕಾರಿಗಳು ಮುಂದಾಗಿದ್ದಾರೆ.