ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಪೇಂಟಿಂಗ್ ಮಾಡುವ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಆರ್ ಪುರಂನ ಕೊಡಿಗೇಹಳ್ಳಿ ಮುಖ್ಯರಸ್ತೆಯ ಮುನೇಶ್ವರ ನಗರದಲ್ಲಿ ನಡೆದಿದೆ.
ಉತ್ತರ ಭಾರತ ಮೂಲದ ಶೈಲೇಶ್ (25) ಗಾಯಗೊಂಡಿರುವ ಯುವಕ. ಆಂಧ್ರಪ್ರದೇಶ ಮೂಲದ ವಿಜಯಕುಮಾರ್ ಎಂಬುವವರು ಹೈಟೆನ್ಷನ್ ತಂತಿಯ ಕೆಳಗೆ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿದ್ದು, ಕಟ್ಟಡ ಕಾಮಗಾರಿ ಮುಗಿದು ಪೇಂಟಿಂಗ್ ಕಾರ್ಯ ನಡೆಯುತ್ತಿರುವಾಗ ಈ ಅವಘಡ ಸಂಭವಿಸಿದೆ.
ಹೈಟೆನ್ಷನ್ ಲೈನ್ ಶಾಕ್ನಿಂದ ಮನೆಯಲ್ಲಿದ್ದ ಟಿವಿ, ಸ್ವಿಚ್ ಬೋರ್ಡ್ ಸೇರಿದಂತೆ ವೈರ್ಗಳು ಸುಟ್ಟು ಹೋಗಿವೆ. ಕೆಲಸ ಮಾಡುತ್ತಿದ್ದ ಯುವಕ ಕೆಳಗಡೆ ಬಿದ್ದು, ಆತನ ದೇಹ ಶೇ.60 ರಷ್ಟು ಸುಟ್ಟಿದ್ದು ತಕ್ಷಣವೇ ಕೆಆರ್ ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಯುವಕನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಬೇರೆ ಉತ್ತಮ ಗುಣಮಟ್ಟದ ಆಸ್ಪತ್ರೆಗೆ ಕಳುಹಿಸಲಾಗಿದೆ.
ಹೈಟೆನ್ಷನ್ ತಂತಿ ಹಾದು ಹೋಗಿರುವ ಅಕ್ಕ ಪಕ್ಕದಲ್ಲಿ ಎತ್ತರವಾಗಿ ಮನೆ ನಿರ್ಮಾಣ ಮಾಡಬಾರದು ಎಂಬ ನಿಯಮವನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಾಣ ಮಾಡಿರುವುದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ.