ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರ ದೃಷ್ಟಿಯಿಂದ ರಾಜ್ಯ ಸರ್ಕಾರ ಪಾರ್ಕ್ಗಳಲ್ಲಿ ವಾಕ್ ಮಾಡುವುದು ನಿಷೇಧ ಹೇರಿದರೂ ಐಪಿಎಸ್ ಅಧಿಕಾರಿಯೊಬ್ಬರ ಒತ್ತಡಕ್ಕೆ ಮಣಿದು ಪಾಕ್ನೊಳಗೆ ಪ್ರವೇಶ ಕಲ್ಪಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ನಿಯಮ ಪಾಲನೆ ಮಾಡಿ ಜನರಿಗೆ ಮಾದರಿಯಾಗಬೇಕಾದ ಸರ್ಕಾರಿ ಅಧಿಕಾರಿಗಳೇ ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಾರ್ಕ್ಗಳಿಗೆ ಹೋಗುವುದನ್ನು ನಿಷೇಧಿಸಿ ತೋಟಗಾರಿಕೆ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಿ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಆದರೆ, ಸರ್ಕಾರ ಆದೇಶವನ್ನು ಪಾಲನೆ ಮಾಡಬೇಕಿದ್ದ ಸರ್ಕಾರಿ ಅಧಿಕಾರಿಗಳೇ ನಿಯಮವನ್ನು ಉಲ್ಲಂಘಿಸಿದ್ದಾರೆ.
ಐಪಿಎಸ್ ಅಧಿಕಾರಿ ಒತ್ತಡಕ್ಕೆ ಒಳಗಾದ್ರಾ ಮಹಿಳಾ ಅಧಿಕಾರಿ ?
ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆ ಅಲಂಕರಿಸಿರುವ ಡಿಐಜಿ ಮಟ್ಟದ ಅಧಿಕಾರಿಯೊಬ್ಬರು ತಮ್ಮ ಪ್ರಭಾವ ಬಳಸಿ ಕಬ್ಬನ್ ಪಾರ್ಕ್ ಪ್ರವೇಶಿಸುವ ಅನುಮತಿ ಪಡೆದುಕೊಂಡಿದ್ದಾರೆ. ಲಾಕ್ಡೌನ್ ಪ್ರತಿದಿನ ಪಾಕ್ನೊಳಗೆ ಹೋಗಿ ಕಸರತ್ತು ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅನುಮತಿ ನೀಡಿದ ತೋಟಗಾರಿಕೆ ಇಲಾಖೆ ಕಬ್ಬನ್ ಪಾರ್ಕ್ ಉಪ ನಿರ್ದೇಶಕಿ ಕುಸುಮಾ ಅವರನ್ನು ಸಸ್ಪೆಂಡ್ ಮಾಡಿ ಇಲಾಖೆ ಮಟ್ಟದಲ್ಲಿ ತನಿಖೆ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರು ಸೇರಿದಂತೆ ಸಾವಿರಾರು ಜನರು ಪಾಕ್ಗೆ ಬರುತ್ತಿದ್ದರು. ವ್ಯಾಯಾಮ, ಯೋಗ ಸೇರಿದಂತೆ ನಾನಾ ತರಹದ ದೈಹಿಕ ಕಸರತ್ತು ನಡೆಸುತ್ತಿದ್ದರು. ಲಾಕ್ಡೌನ್ ಕಾರಣಕ್ಕಾಗಿ ಪಾರ್ಕ್ ಪ್ರವೇಶ ಬಂದ್ ಮಾಡಿದ್ದರಿಂದ ಸಾವಿರಾರು ಜನರಿಗೆ ವಾಕಿಂಗ್ ಮಾಡಲು ಸಾಧ್ಯವಾಗಿಲ್ಲ. ಆದರೆ, ಪಾರ್ಕ್ಗೆ ತಮಗೆ ಬೇಕಾದವರನ್ನು ಒಳಗೆ ಬಿಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಡಾ.ಎಸ್.ಉಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಲಾಕ್ಡೌನ್ ಆದೇಶ ಜಾರಿ ಇದ್ದರೂ ಪಾರ್ಕ್ಗೆ ಹೋಗಿರುವ ಐಪಿಎಸ್ ಅಧಿಕಾರಿ ಮೇಲೆ ಪೊಲೀಸ್ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿ ಬಂದಿದೆ.