ಬೆಂಗಳೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರದಿಂದಲೂ ಓಡಿಸುತ್ತಿದ್ದಾರೆ. ಅವರಿಗೆ ಈ ಸ್ಥಿತಿ ಬರಬಾರದಿತ್ತು. ಪ್ರಶ್ನಾತೀತ ನಾಯಕನಿಗೆ ಎಂತಹ ದುರ್ದೈವದ ಸ್ಥಿತಿ ಎದುರಾಗಿದೆ ಎಂದು ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಚಿಮ್ಮನಕಟ್ಟಿ ಹೇಳಿಕೆ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಒಂದು ಕಾಲ ಇತ್ತು. ಪ್ರಶ್ನಾತೀತ ನಾಯಕ ಸಿದ್ದರಾಮಯ್ಯ ಎನ್ನುವ ಕಾಲವಿತ್ತು. ಭವಿಷ್ಯದ ಪ್ರಧಾನಿ ಸಿದ್ದರಾಮಯ್ಯ ಅಂತಾ ತುತ್ತೂರಿ ಊದುತ್ತಿದ್ದ ಕಾಲ ಇತ್ತು. ಅವರಿಗೆ ಎಂಥಾ ದುರ್ದೈವದ ಸ್ಥಿತಿ ಬಂದಿದೆ ಎಂದರೆ, ಅವರಿರುವ ಕ್ಷೇತ್ರದಿಂದಲೂ ಓಡಿಸುತ್ತಿದ್ದಾರೆ.
ಪ್ರಶ್ನಾತೀತ ನಾಯಕನ ಸ್ಥಿತಿ ಯಾಕೆ ಹೀಗಾಯ್ತು?ಚಿಮ್ಮನಕಟ್ಟಿ ಇಷ್ಟು ಧೈರ್ಯ ಮಾಡಿ ಹೇಳೋದಿಲ್ಲ. ಬಹಳ ಜನರಿಗೆ ಸಿದ್ದರಾಮಯ್ಯ ವಿರುದ್ಧ ಸಿಟ್ಟಿದೆ. ಪರಮೇಶ್ವರ್ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಎಂದು ದೊಡ್ಡ ವರ್ಗ ಅಸಹನೆಯಿಂದ ಕುದಿಯುತ್ತಿದೆ. ಖರ್ಗೆ ಮುಖ್ಯಮಂತ್ರಿ ಆಗೋದನ್ನ ತಪ್ಪಿಸಿದರು ಎನ್ನುವ ಅಸಮಾಧಾನವೂ ಒಂದು ಸಮುದಾಯಕ್ಕೆ ಇದೆ. ಆದರೂ ಪ್ರಶ್ನಾತೀತ ನಾಯಕರಿಗೆ ಈ ಸ್ಥಿತಿ ಬರಬಾರದಿತ್ತು ಎಂದು ವ್ಯಂಗ್ಯವಾಡಿದರು.
(ಇದನ್ನೂ ಓದಿ: ಪೊಲೀಸರ ಮೇಲೆ ಯುವಕರ ಗೂಂಡಾಗಿರಿ.. ಮಾಸ್ಕ್ ಧರಿಸದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ.. ವಿಡಿಯೋದಲ್ಲಿ ಕೃತ್ಯ ಸೆರೆ)
ನಮ್ಮದು ಪಾಸಿಟಿವ್ ಪಾಲಿಟಿಕ್ಸ್, ಯಾರೇ ಎದುರಾಳಿ ನಿಂತರೂ ಬಿಜೆಪಿಯನ್ನ ಗೆಲ್ಲಿಸೋ ಕೆಲಸವನ್ನು ನಾವು ಮಾಡುತ್ತೇವೆ, ಗೆಲ್ಲೋದು ಹೇಗೆ ಅಂತಾ ಯೋಜನೆ ಮಾಡುತ್ತೇವೆ. ಪಕ್ಷದ ಅಭ್ಯರ್ಥಿಗಳನ್ನೇ ಸೋಲಿಸುವ ರಾಜಕಾರಣ ಮಾಡುವುದಿಲ್ಲ. ಗೆಲ್ಲುವ ರಾಜಕಾರಣದಲ್ಲಿ ವಿಶ್ವಾಸ ಇಟ್ಟಿದ್ದೇವೆ ಎಂದರು.
ಅಂತರಿಕ ಗೊಂದಲದಿಂದ ಪಾರಾಗಲು ಡಿಕೆಶಿ ಯತ್ನ: ಡಿ ಕೆ ಶಿವಕುಮಾರ್ ಅವರ ರಾಜಕೀಯ ಮನಸ್ಥಿತಿಯೇ ಬೇರೆ, ಡಿಕೆಶಿ ಪ್ರಕಾರ ನಾಯಕತ್ವ ಅಂದರೆ ಗೂಂಡಾಗಿರಿ ಮಾಡೋದು. ಚುನಾವಣೆಗೆ ದುಡ್ಡು ಮಾಡಿರೋರೇ ನಿಲ್ಬೇಕು ಅನ್ನೋದು ಅವರ ಮನಸ್ಥಿತಿಯಾಗಿದ್ದರೆ, ನಮ್ಮದು ಕೇಡರ್ ಆಧಾರಿತ ಪಕ್ಷ ಎಂದು ಬಿಜೆಪಿ ಸೇರದ ಹಿನ್ನೆಲೆ ಜೈಲು ಎಂಬ ಡಿಕೆಶಿ ಹೇಳಿಕೆ ವಿಚಾರ ಕುರಿತು ಸಿ ಟಿ ರವಿ ತಿರುಗೇಟು ನೀಡಿದರು.
ಡಿಕೆಶಿ ಕಾಂಗ್ರೆಸ್ನಲ್ಲಿ ಅಕ್ರಮ ಆಸ್ತಿ ಮಾಡಿಕೊಂಡಿದ್ದಾರೆ ಎನ್ನುವುದನ್ನು ಈಗ ಅವರ ಹೇಳಿಕೆಯಿಂದಲೇ ಒಪ್ಪಿಕೊಂಡ ಹಾಗಾಯ್ತು. ಅವರ ಮೇಲೆ ಅಕ್ರಮ ಆಸ್ತಿಗೆ ಸಂಬಂಧ ಕೇಸ್ ಇದೆ. ಅವರು ಜೈಲಿಗೆ ಹೋಗಿದ್ದು ಬಿಜೆಪಿಗೆ ಹೋಗಿಲ್ಲ ಅಂತಾ ಅಲ್ಲ. ಬಿಜೆಪಿಗೆ ಹೋಗ್ಲಿಲ್ಲ ಅಂತಾ ಎಫ್‌ಐಆರ್, ಚಾರ್ಜ್‌ಶೀಟ್ ಹಾಕಲಿಲ್ಲ. ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಚಾರ್ಜ್‌ಶೀಟ್, ಎಫ್‌ಐಆರ್ ಹಾಕಲಾಗಿದೆ. ಕೇಸ್‌ನಿಂದ ಬಚಾವಾಗುವ ಅವಕಾಶ ಇದ್ದಿದ್ದರೆ ಡಿಕೆಶಿ ಮೊದಲೇ ಬಂದು ಬಿಜೆಪಿಗೆ ಸೇರುತ್ತಿದ್ದರು. ಈಗ ಕಾಂಗ್ರೆಸ್ನಲ್ಲಿ ಅಂತರ್ಯುದ್ಧ ನಡೆಯುತ್ತಿದೆ. ಆಂತರಿಕ ಗೊಂದಲದಿಂದ ಪಾರಾಗಲು, ಕೇಸ್ ಮರೆಮಾಚಲು ಇಂತಹ ಹೇಳಿಕೆ ಕೊಟ್ಟಿದಾರೆ ಎಂದರು.
ರಾಜಕೀಯ ಶತ್ರುಗಳಿರಲ್ಲ, ವಿರೋಧಿಗಳಷ್ಟೇ ಇರುತ್ತಾರೆ : ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಡೆಮಾಕ್ರಸಿಯಲ್ಲಿ ಶತ್ರುಗಳು ಅಂತಾ ಯಾರೂ ಇರುವುದಿಲ್ಲ. ರಾಜಕೀಯ ವಿರೋಧಿಗಳಿದ್ದಾರೆ ಅಷ್ಟೇ.. ಹಾಗಾಗಿ, ನಾವು ಯಾರನ್ನೂ ಶತ್ರು ಅಂತಾ ಪರಿಗಣಿಸೋದಿಲ್ಲ ಎಂದು ಜೆಡಿಎಸ್ ಜೊತೆ ಮೈತ್ರಿ ಕುರಿತು ಯಡಿಯೂರಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.