ಲಂಡನ್/ಬೆಂಗಳೂರು: ಜಗಜ್ಯೋತಿ ಬಸವಣ್ಣನ ತತ್ವವನ್ನು ಜಗತ್ತಿಗೆ ಸಾರುತ್ತಿರುವ ಲಂಡನ್‌ನ ಕನ್ನಡ ಕಾರ್ಯಕರ್ತರಿಗೆ ಸಚಿವ ಸಿ ಟಿ ರವಿ ಕೃತಜ್ಞತೆ ಸಲ್ಲಿಸಿದ್ದಾರೆ.
ಲಂಡನ್ ಪ್ರವಾಸದಲ್ಲಿರುವ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಥೇಮ್ಸ್ ನದಿ ತೀರದಲ್ಲಿ ಸ್ಥಾಪಿತಗೊಂಡಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಅವರೊಂದಿಗೆ ಲಂಡನ್ ಮಾಜಿ ಮೇಯರ್ ಡಾ.ನೀರಜ್ ಪಾಟೇಲ್ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಸಚಿವ ಸಿ ಟಿ ರವಿ, 12ನೇ ಶತಮಾನದಲ್ಲಿಯೇ ಬಸವಣ್ಣನವರು ಸಮಾನತೆಯ ತತ್ವ ಸಾರಿದ್ದರು. ದನಿ ಇಲ್ಲದವರ ದನಿಯಾಗಿದ್ದರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದಿದ್ದರು. ಅವರ ಪ್ರಭಾವ, ಚಿಂತನೆಗಳು ಜಗದಗಲ ಪಸರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಲಂಡನ್‌ನಲ್ಲಿರುವ ಕನ್ನಡ ಸಂಘದ ಕಾರ್ಯಕರ್ತರ ಭೇಟಿ ಮಾಡಿದ ಸಚಿವರು, ಸಾಗರೋತ್ತರದಲ್ಲಿ ಕನ್ನಡದ ಕಾಯಕ ಮಾಡುತ್ತಿರುವವರ ಬಗ್ಗೆ ಗುಣಗಾನ ಮಾಡಿದರು. ಕರ್ನಾಟಕ ಮೂಲದ ಉದ್ಯಮಿಗಳೊಂದಿಗೂ ಕುಶಲೋಪರಿ ಮಾತುಕತೆ ನಡೆಸುವ ಜೊತೆಗೆ ಪ್ರವಾಸೋದ್ಯಮ ಉತ್ತೇಜನ ಕುರಿತು ಅನಿವಾಸಿ ಭಾರತೀಯರೊಂದಿಗೆ ಸಮಾಲೋಚನೆ ನಡೆಸಿದರು.
ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಅನಿವಾಸಿ ಭಾರತೀಯರ ಮೆಚ್ಚುಗೆ ವ್ಯಕ್ತವಾಗಿದ್ದು ಮತ್ತಷ್ಟು ಅಭಿವೃದ್ಧಿ ಕುರಿತು ಸಚಿವರಿಗೆ ಸಲಹೆ ನೀಡಿದರು. ಲಂಡನ್‌ನಲ್ಲಿ ಕರುನಾಡಿನ ನಾಡು ನುಡಿ ವೈಭವ ಸಾರಿದ ಸಚಿವರ ಬಗ್ಗೆ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅಭಿನಂದನೆ ಸಲ್ಲಿಸಿದರು.