ಬೆಂಗಳೂರು: ಡ್ರಗ್ಸ್ ಮಾಫಿಯಾದಿಂದ ಮೈತ್ರಿ ಸರ್ಕಾರ ಪತನವಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಚಿವ ಸಿ.ಟಿ. ರವಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ‘ಅವರು ಸಹಜ ಸ್ಥಿತಿಯಲ್ಲಿ ಹೇಳಿಕೆ ನೀಡಿದ್ದಾರೋ ಅಥವಾ ಮತ್ತಿನಲ್ಲಿ ಹೇಳಿಕೆ ನೀಡಿದ್ದಾರೋ ತಿಳಿಯುತ್ತಿಲ್ಲ’ ಎಂದು ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಪತನಗೊಳ್ಳಲು ಅವರ ಸಹವರ್ತಿಗಳೇ ಕಾರಣ. ಅವರದ್ದೇ ಪಕ್ಷದ ರಾಜ್ಯಾಧ್ಯಕ್ಷರೇ ರಾಜೀನಾಮೆ ಕೊಟ್ಟು ಹೊರಗೆ ಬಂದರು. ಹಾಗೆ ಬರಲು ಕಾರಣವೇನು ಎಂಬುದನ್ನೂ ಅವರೇ ವಿವರಿಸಿದ್ದಾರೆ’ ಎಂದು ಸಿ ಟಿ ರವಿ ಹೇಳಿದ್ರು.
‘ಈ ರೀತಿ ಹೇಳಿದ್ದಾರೆಂದರೆ ಕುಮಾರಸ್ವಾಮಿಯವರನ್ನು ಒಮ್ಮೆ ಪರೀಕ್ಷೆಗೆ ಒಳಪಡಿಸಬೇಕು. ಸರ್ಕಾರ ಯಾಕೆ ಬಿತ್ತು ಎನ್ನುವುದು ಎಲ್ಲಾರಿಗೂ ಗೊತ್ತಿದೆ. ರೋಷನ್ ಬೇಗ್ ರಾಜೀನಾಮೆ ನೀಡಿದರು. ಅದಕ್ಕೆಲ್ಲಾ ಕಾರಣ ನೀಡಿದ್ದಾರೆ. ಸರ್ಕಾರ ಏಕಾಏಕಿ ಬಿದ್ದಿಲ್ಲ. ಅದಕ್ಕೆ ಒಂದು ವರ್ಷದ ಆಂತರಿಕ ಕಿತ್ತಾಟ ಆಗಿದೆ’ ಎಂದರು.
ಇದನ್ನೂ ಓದಿ: ಡ್ರಗ್ಸ್ ಮಾಫಿಯಾದ ಹಣದಿಂದಲೇ ನನ್ನ ಸರ್ಕಾರ ಬೀಳಿಸಿದ್ದಾರೆ : ಹೆಚ್‌ಡಿಕೆ
‘ಡ್ರಗ್ಸ್ ಆರೋಪ ಮಾಡುತ್ತಿದ್ದಿರಲ್ಲ, ನೀವು ಅಂದು ಮುಖ್ಯಮಂತ್ರಿ ಆಗಿದ್ದವರು. ನಿಮ್ಮ ಬಳಿ ಅಧಿಕಾರ ಇತ್ತು. ಗುಪ್ತಚರ ಇಲಾಖೆ ಇತ್ತು. ಹಾಗಾದರೆ ನೀವು ಅಷ್ಟು ದುರ್ಬಲ ಆಗಿದ್ದರೇ? ಅಥವಾ ನಿಮಗೆ ಡ್ರಗ್ಸ್ ಮಾಫಿಯಾದವರ ಒತ್ತಡ ಇತ್ತೆ?, ಆಂತರಿಕ ಬಾಂಧವ್ಯ ಇತ್ತೆ?. ನೀವು ಸಿಎಂ ಆಗಿದ್ದವರು ಹೀಗೆಲ್ಲಾ ಮಾತಾಡಿ ನಗೆಪಾಟಲಿಗೆ ಈಡಾಗಬೇಡಿ’ ಎಂದು ಕಿಡಿಕಾರಿದರು.