ಬೆಂಗಳೂರು: ಬಿಹಾರ ಚುನಾವಣೆಯಲ್ಲಿ ಎನ್ಡಿಎ ಪರ ಮತ ಚಲಾಯಿಸುವಂತೆ ತಮ್ಮ ಕುಟುಂಬ ಸದಸ್ಯರ ಮನವೊಲಿಸುವಂತೆ ಬೆಂಗಳೂರಿನಲ್ಲಿ ನೆಲೆಸಿರುವ ಬಿಹಾರ ರಾಜ್ಯದ ಜನರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮನವಿ ಮಾಡಿದರು.
ನಗರದ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ನಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಬಿಹಾರದ ನಮ್ಮ ಜನರೊಂದಿಗೆ ಸಿ.ಟಿ. ರವಿ ಸಂವಾದ ನಡೆಸಿದರು. 2014 ರಿಂದ ಭಾರತ ಮತ್ತು ಬಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿಹಾರದ ಎನ್ಡಿಎ ಸರ್ಕಾರ ನೀಡಿರುವ ಕೊಡುಗೆಗಳು, ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದರು.
ಬಿಹಾರದ ಅಭಿವೃದ್ಧಿ ಎನ್ಡಿಎ ಸರ್ಕಾರದಿಂದ ಮಾತ್ರ ಸಾಧ್ಯ, ಹಿಂದಿನ ಅಭಿವೃದ್ಧಿ ಕಾರ್ಯವನ್ನು ಗಮನಿಸಿ ಎನ್‌ಡಿಎಗೆ ಮತ ಚಲಾಯಿಸಲು ತಮ್ಮ ತಮ್ಮ ಕುಟುಂಬಸ್ಥರು, ಸ್ನೇಹಿತರು ಮತ್ತು ಸಂಬಂಧಿಕರ ಮನವೊಲಿಸುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಬಿಹಾರಿಗಳು, ತಮ್ಮ ಕುಟುಂಬ ಸದಸ್ಯರ ಮೇಲೆ ಪ್ರಭಾವ ಬೀರುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ.