ಬೆಂಗಳೂರು: ಐದು ವರ್ಷಗಳ ಹಿಂದೆ ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಗೊಳಿಸುತ್ತಿದ್ದಂತೆ ಆತ ಪೊಲೀಸರ ಕಣ್ ತಪ್ಪಿಸಿ ಕಾಣೆಯಾಗಿದ್ದ. ಇದೀಗ ಬೆಂಗಳೂರಿನಲ್ಲಿ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಕೊತ್ತನೂರು ಪೊಲೀಸರ ಅತಿಥಿಯಾಗಿದ್ದಾನೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳಾದ ಶರತ್ ಕುಮಾರ್, ಸುನಿಲ್ , ಅರವಿಂದ್, ಪ್ರಕಾಶ ಬಂಧಿತ ಆರೋಪಿಗಳು. ಐದು ವರ್ಷಗಳ ಹಿಂದೆ ಪ್ರಮುಖ ಆರೋಪಿ ಶರತ್ ಎಂಬಾತ ಕೆಜಿಎಫ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಯತ್ನ ಸೇರಿದಂತೆ ಎಂಟು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿ ಜಾಮೀನು ಮೇಲೆ ಹೊರ ಬಂದಿದ್ದ. ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುತ್ತಿದ್ದಂತೆ ಆತ ಅಲ್ಲಿಂದ ಎಸ್ಕೇಪ್ ಆಗಿದ್ದ.
ಕೊತ್ತನೂರು, ಅಮತೃಹಳ್ಳಿ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಕೇಸ್ನಲ್ಲಿ ಭಾಗಿಯಾಗಿದ್ದಾನೆ. ಈ ಕೃತ್ಯಕ್ಕೆ ಸಹಚರರು ಸಾಥ್ ನೀಡಿದ್ದಾರೆ. ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ ಇವರು ರಾತ್ರಿ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ಸದ್ಯ ಆರೋಪಿಗಳಿಂದ 1. 262 ಗ್ರಾಂ ಚಿನ್ನ, 2,600 ಗ್ರಾಂ ಬೆಳ್ಳಿ ಸಾಮಾನು, 3 ಬೈಕ್ಗಳು ಸೇರಿ 40 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಕೊತ್ತನೂರು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಸದಾ ಮಾರಕಾಸ್ತ್ರಗಳನ್ನಿಟ್ಟುಕೊಂಡು ಕೃತ್ಯಗಳಿಗೆ ರೆಡಿಯಾಗಿರುತ್ತಿದ್ದ ಆರೋಪಿ ಶರತ್ ಗ್ಯಾಂಗ್, ಪೊಲೀಸರು ಬಂಧಿಸಲು ಬಂದರೆ ತಪ್ಪಿಸಿಕೊಳ್ಳಲು ಪೆಪ್ಪರ್ ಸ್ಪ್ರೆ ಸಿಂಪಡಿಸಿ ಪರಾರಿಯಾಗುವ ಉಪಾಯ ಕಂಡುಕೊಂಡಿದ್ದರು. ಸದ್ಯ ಬಂಧಿತ ಆರೋಪಿಗಳಿಂದ ಒಟ್ಟು 12 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.