ಬೆಂಗಳೂರು: ಯುವಕನನ್ನು ಅಪಹರಿಸಿ ಬರ್ಬರವಾಗಿ ಹತ್ಯೆಗೈದು, ಬಳಿಕ ಮೃತದೇಹ ಎಸೆದು ಹೋಗಿರುವ ಘಟನೆ ಕೆಂಗೇರಿ ವ್ಯಾಪ್ತಿಯ ಕೋಣಸಂದ್ರ ಕೆರೆ ಬಳಿ ನಡೆದಿದೆ. ಮೊಹಮ್ಮದ್ ತಾಹೀರ್ (19) ಕೊಲೆಯಾದ ಯುವಕ. ಜುಲೈ 10ರ ರಾತ್ರಿ 11 ಗಂಟೆ ಸುಮಾರಿಗೆ ಚಂದ್ರಾಲೇಔಟ್ನ ತನ್ನ ಮನೆಯಿಂದ ಹೊರ ಹೋದ ತಾಹೀರ್ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಹಿನ್ನೆಲೆ: ಚಂದ್ರಾಲೇಔಟ್ ನಿವಾಸಿಯಾಗಿರುವ ತಾಹೀರ್, ಖಾಸಗಿ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಒಮ್ಮೆ ತಾಹೀರ್ ಹಾಗೂ ಚಾಮರಾಜಪೇಟೆಯ ಟಿಪ್ಪು ನಗರದ ನಿವಾಸಿಯಾಗಿರುವ ನ್ಯಾಮತ್ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆಯಾಗಿತ್ತು. ಜುಲೈ 10 ರಂದು ರಾತ್ರಿ 11 ಗಂಟೆಗೆ ಮನೆಯಲ್ಲಿದ್ದ ತಾಹೀರ್ಗೆ ನ್ಯಾಮತ್ ಹಾಗೂ ಆತನ ಸ್ನೇಹಿತರು ಕರೆ ಮಾಡಿ ಕರೆದಿದ್ದರು.
ಬಳಿಕ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿಯಿಂದ ಇಬ್ಬರು ತಾಹೀರ್ನನ್ನು ಆಟೋದಲ್ಲಿ ಅಪಹರಿಸಿಕೊಂಡು ಕೆಂಗೇರಿ ಕಡೆಗೆ ಕರೆದುಕೊಂಡು ಹೋಗಿದ್ದರು. ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ, ಆತನ ತಂದೆ ಸೈಯದ್ ಮೆಹಬೂಬ್ ಅವರು ತಾಹೀರ್ಗೆ ಕರೆ ಮಾಡಿದ್ದರು. ಆದರೆ, ತಾಹೀರ್ ಫೋನ್ ರಿಸೀವ್ ಮಾಡಿರಲಿಲ್ಲ. ಬಳಿಕ ನ್ಯಾಮತ್ ಮನೆ ಬಳಿ ತೆರಳಿ ವಿಚಾರಿಸಿದ್ದರು.
ಇದನ್ನೂ ಓದಿ: ಜೈನ ಮುನಿ ಹತ್ಯೆ ಪ್ರಕರಣದ ತನಿಖೆ: ಟವೆಲ್‌ನಲ್ಲಿ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ!
ಈ ವೇಳೆ ಆರೋಪಿ ನ್ಯಾಮತ್ ತಂದೆ ನ್ಯಾಮತ್ಗೆ ಕರೆ ಮಾಡಿದಾಗ, 'ತಾನು ಕೆಂಗೇರಿಯಲ್ಲಿರುವುದಾಗಿ, ತಾಹೀರ್ ಸಹ ತನ್ನೊಂದಿಗೆ ಇರುವುದಾಗಿ' ಹೇಳಿದ್ದ. ಆಗ ನಿನ್ನೊಂದಿಗೆ ತಾಹೀರ್ನನ್ನು ಕರೆತರುವಂತೆ ಅವರು ಸೂಚಿಸಿದಾಗ ನ್ಯಾಮತ್ ಕಾಲ್ ಕಟ್ ಮಾಡಿದ್ದ. ಬಳಿಕ ತಾಹೀರ್ ಪೋಷಕರು ಕೆಂಗೇರಿ ಬಳಿ ಬಂದು ಹುಡುಕಾಟ ನಡೆಸಿದ್ದರು. ಆದರೆ, ಅಲ್ಲಿ ತಾಹೀರ್ ಸಿಗದಿದ್ದಾಗ ವಾಪಸ್ ಮನೆಗೆ ಬಂದು ಚಂದ್ರಾಲೇಔಟ್ ಠಾಣೆಯಲ್ಲಿ ಮಗನ ಅಪಹರರಣದ ಬಗ್ಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಚಂದ್ರಾಲೇಔಟ್ ಪೊಲೀಸರು ಹುಡುಕಾಟ ಆರಂಭಿಸಿದಾಗ ಇಂದು ಬೆಳಗ್ಗೆ ತಾಹೀರ್ ಮೃತದೇಹ ಕೆಂಗೇರಿಯ ಕೋಣಸಂದ್ರ ಕೆರೆ ಬಳಿ ಪತ್ತೆಯಾಗಿದೆ. ಆರೋಪಿ ನ್ಯಾಮತ್ನನ್ನು ಚಂದ್ರಾಲೇಔಟ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಕಾರಣವೇನು? ಎಂಬುದರ ಕುರಿತು ತನಿಖೆ ನಡೆಸಿದ್ದಾರೆ.
''ಈ ಹಿಂದೆ ಟಿಪ್ಪು ನಗರದಲ್ಲಿ ತಾಹೀರ್ ಕುಟುಂಬ ವಾಸವಾಗಿತ್ತು. ಅದೇ ಸಂದರ್ಭದಲ್ಲಿ ತಾಹೀರ್ ಹಾಗೂ ಆರೋಪಿ ನ್ಯಾಮತ್ ಯುವತಿಯೊಬ್ಬಳ ವಿಚಾರವಾಗಿ ಕಿತ್ತಾಡಿಕೊಂಡಿದ್ದರು. ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ವರ್ಷದ ಹಿಂದೆ ಈ ಬಗ್ಗೆ ದೂರು ಕೂಡ ದಾಖಲಾಗಿತ್ತು. ಬಳಿಕ ತಾಹೀರ್ ಕುಟುಂಬ ಚಂದ್ರಾಲೇಔಟಿಗೆ ಶಿಫ್ಟ್ ಆಗಿತ್ತು. ಆದರೆ, ಇಬ್ಬರ ಜಗಳ ಅಷ್ಟಕ್ಕೆ ನಿಂತಿರಲಿಲ್ಲ. ನ್ಯಾಮತ್ನ ಕೊಲ್ಲುವುದಾಗಿ ತಾಹೀರ್ ಸ್ನೇಹಿತರ ಬಳಿ ಹೇಳಿಕೊಂಡು ತಿರುಗಾಡುತ್ತಿದ್ದ.
ಈ ವಿಚಾರ ಕಿವಿಗೆ ಬಿದ್ದ ಹಿನ್ನೆಲೆಯಲ್ಲಿ ಸಂಧಾನ ಮಾಡಿಕೊಳ್ಳುವುದಾಗಿ ನ್ಯಾಮತ್ ತನ್ನ ಸ್ನೇಹಿತ ಇರ್ಫಾನ್ ಕಡೆಯಿಂದ ತಾಹೀರ್ಗೆ ಕರೆ ಮಾಡಿಸಿದ್ದ. ಅದರಂತೆ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಬಂದಿದ್ದ ತಾಹೀರ್ನನ್ನು ನ್ಯಾಮತ್, ನದೀಂ ಹಾಗೂ ಸಮೀರ್ ಆಟೋದಲ್ಲಿ ಕೆಂಗೇರಿಗೆ ಕರೆದೊಯ್ದಿದ್ದರು. ಬಳಿಕ ಕೋಣಸಂದ್ರದ ಬಳಿ ತಾಹೀರ್ನಿಗೆ ಚಾಕುವಿನಿಂದ ಇರಿದು ನಿರ್ಜನ ಪ್ರದೇಶದಲ್ಲಿ ಶವ ಎಸೆದಿರಿವುದು ತನಿಖೆಯಲ್ಲಿ ಕಂಡು ಬಂದಿದೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹಳೇ ದ್ವೇಷದ ಹಿನ್ನೆಲೆ ಚಾಕು ಇರಿತ: ಚಿಕಿತ್ಸೆ ಫಲಿಸದೇ ಯುವಕ ಸಾವು, ಎರಡು ಗಂಟೆಯಲ್ಲಿಯೇ ಆರೋಪಿಗಳ ಬಂಧನ