ಬೆಂಗಳೂರು: ಯುವತಿಯೋರ್ವಳ ವಿಚಾರವಾಗಿ ಮೂವರು ಸ್ನೇಹಿತರು ಗಲಾಟೆ ಮಾಡಿಕೊಂಡಿದ್ದು, ಓರ್ವನ ತಲೆಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರಿನ ಕಂಟೋನ್ಮೆಂಟ್ ಬಳಿಯಿರುವ ತಿಮ್ಮಯ್ಯ ಸರ್ಕಲ್ನಲ್ಲಿ ತಡರಾತ್ರಿ ನಡೆದಿದೆ. ಮದ್ಯದ ಅಮಲಿನಲ್ಲಿ ಗಫರ್ ಹಾಗೂ ಹುಸೇನ್ ಯುವತಿಯೊಬ್ಬಳ ವಿಚಾರವಾಗಿ ಹೊಡೆದಾಡಿಕೊಂಡಿದ್ದಾರೆ. ಗಫರ್ನ ತಲೆಗೆ ಹುಸೇನ್ ಹಾಗೂ ಮತ್ತೋರ್ವ ಬಿಯರ್ ಬಾಟಲ್ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಗಫರ್ನ ತಲೆಗೆ ತೀವ್ರ ಗಾಯಗಳಾಗಿದ್ದು, ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ. ಹೈಗ್ರೌಂಡ್ಸ್ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುವನ್ನು ಬೌರಿಂಗ್ ಅಸ್ಪತ್ರೆಗೆ ದಾಖಲಿಸಿದ್ದಾರೆ. ಗಫರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಲ್ಲೆ ನಡೆಸಿದ ಹುಸೇನ್ ಹಾಗೂ ಮತ್ತೊಬ್ಬ ಯುವಕನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರಲ್ಲಿ ಪ್ರತ್ಯೇಕ ಘಟನೆ: ಮನೆಗೆ ಬಾರದ ಪತ್ನಿಯನ್ನೇ ಕೊಂದ ಪತಿ, ಕಾವೇರಿ ಹಿನ್ನೀರಲ್ಲಿ ಮುಳುಗಿ 3 ವಿದ್ಯಾರ್ಥಿಗಳ ಸಾವು
ಯುವತಿಯ ವಿಚಾರವಾಗಿ ಯುವಕರು ಗಲಾಟೆ ಮಾಡಿಕೊಂಡು ಸಾವಲ್ಲೋ ಅಥವಾ ನೋವಲ್ಲೋ ಜಗಳ ಅಂತ್ಯ ಕಂಡ ಘಟನೆಗಳು ಈ ಮೊದಲು ವರದಿಯಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲೇ ಇಂತಹದ್ದೊಂದು ಘಟನೆ ವರದಿಯಾಗಿತ್ತು. ಯುವಕನನ್ನು ಅಪಹರಿಸಿ ಬರ್ಬರವಾಗಿ ಹತ್ಯೆಗೈದು, ಬಳಿಕ ಮೃತದೇಹ ಎಸೆದು ಹೋಗಿರುವ ಘಟನೆ ಕೆಂಗೇರಿ ವ್ಯಾಪ್ತಿಯ ಕೋಣಸಂದ್ರ ಕೆರೆ ಬಳಿ ನಡೆದಿತ್ತು. ಮೊಹಮ್ಮದ್ ತಾಹೀರ್ (19) ಕೊಲೆಯಾದ ಯುವಕ. ಜುಲೈ 10ರ ರಾತ್ರಿ 11 ಗಂಟೆ ಸುಮಾರಿಗೆ ಚಂದ್ರಾಲೇಔಟ್ನ ತನ್ನ ಮನೆಯಿಂದ ಹೊರ ಹೋದ ತಾಹೀರ್ ಮರುದಿನ ಶವವಾಗಿ ಪತ್ತೆಯಾಗಿದ್ದ.
ಘಟನೆ ಹಿನ್ನೆಲೆ: ತಾಹೀರ್ ಚಂದ್ರಾಲೇಔಟ್ ನಿವಾಸಿಯಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ತಾಹೀರ್ ಹಾಗೂ ಚಾಮರಾಜಪೇಟೆಯ ಟಿಪ್ಪು ನಗರದ ನಿವಾಸಿ ನ್ಯಾಮತ್ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆಯಾಗಿತ್ತು. ಜುಲೈ 10 ರಂದು ರಾತ್ರಿ 11 ಗಂಟೆಗೆ ಮನೆಯಲ್ಲಿದ್ದ ತಾಹೀರ್ಗೆ ನ್ಯಾಮತ್ ಮತ್ತು ಆತನ ಸ್ನೇಹಿತರು ಕರೆ ಮಾಡಿ ಬರ ಹೇಳಿದ್ದರು.
ಬಳಿಕ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಿಂದ ಇಬ್ಬರು ತಾಹೀರ್ನನ್ನು ಆಟೋದಲ್ಲಿ ಅಪಹರಿಸಿಕೊಂಡು ಕೆಂಗೇರಿ ಕಡೆಗೆ ಕರೆದುಕೊಂಡು ಹೋಗಿದ್ದರು. ರಾತ್ರಿಯಾದರೂ ಮನೆಗೆ ಬಾರದೇ ಇದ್ದ ಮಗನನ್ನು ಆತನ ತಂದೆ ಸೈಯದ್ ಮೆಹಬೂಬ್ ಹುಡುಕಿಕೊಂಡು ತೆರಳಿದ್ದರು. ತಾಹೀರ್ಗೆ ಕರೆ ಮಾಡಿದ್ದರೂ ಆತ ಫೋನ್ ರಿಸೀವ್ ಮಾಡದ ಕಾರಣ ನ್ಯಾಮತ್ ಮನೆಯ ಬಳಿ ತೆರಳಿ ವಿಚಾರಿಸಿದ್ದರು.
ಈ ವೇಳೆ ನ್ಯಾಮತ್ ತಂದೆ ನ್ಯಾಮತ್ಗೆ ಕರೆ ಮಾಡಿದಾಗ ಸೈಯದ್ ತಮ್ಮೊಂದಿಗೆ ಇರುವುದಾಗಿ ಹೇಳಿದ್ದ. ಆದರೆ ತಾಹೀರ್ನನ್ನು ಅವರು ಕರೆತರುವಂತೆ ಅವರು ಸೂಚಿಸಿದಾಗ ನ್ಯಾಮತ್ ಕಾಲ್ ಕಟ್ ಮಾಡಿದ್ದ. ಬಳಿಕ ತಾಹೀರ್ ಬಾರದೇ ಇದ್ದದ್ದನ್ನು ಕಂಡು ಆತನ ಪೋಷಕರು ಕೆಂಗೇರಿ ಬಳಿ ಹುಡುಕಾಟ ನಡೆಸಿ, ನಂತರ ಚಂದ್ರಾಲೇಔಟ್ ಠಾಣೆಯಲ್ಲಿ ಮಗನ ಅಪಹರಣದ ಬಗ್ಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ, ತಾಹೀರ್ ಸಿಕ್ಕಿದ್ದು ಮಾತ್ರ ಶವವಾಗಿ. ಬಳಿಕ ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ, ಆರೋಪಿ ನ್ಯಾಮತ್ನನ್ನು ವಶಕ್ಕೆ ಪಡೆದಿದ್ದರು. ಬಳಿಕ ಕೊಲೆಯ ಕಾರಣವನ್ನು ಆತನಲ್ಲಿ ಕೇಳಿದಾಗ ಎಲ್ಲವನ್ನೂ ಬಾಯಿಬಿಟ್ಟಿದ್ದ. ಯುವತಿಯೊಬ್ಬಳ ವಿಚಾರವಾಗಿ ಒಂದು ವರ್ಷದ ಹಿಂದೆ ನಡೆದ ಗಲಾಟೆಗೆ ತಾಹೀರ್ನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಗುಟ್ಕಾ ತಿಂದು ಮನೆ ಗೋಡೆಗೆ ಉಗುಳಿದ್ದನ್ನು ಪ್ರಶ್ನಿಸಿದ ಸ್ನೇಹಿತನನ್ನು ಕೊಲೆ ಮಾಡಿದ್ದ ಇಬ್ಬರ ಬಂಧನ!