ಬೆಂಗಳೂರು : ರೈಡ್ ಬುಕ್ ಮಾಡಿದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ರ‍್ಯಾಪಿಡೋ ಬೈಕ್ ಕ್ಯಾಪ್ಟನ್ನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರ‍್ಯಾಪಿಡೋ ಬೈಕ್ ಕ್ಯಾಪ್ಟನ್ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದ ಯುವತಿಯೊಬ್ಬಳು ತನಗಾದ ಕಹಿ ಅನುಭವದ ಕುರಿತು ಟ್ವೀಟ್ ಮಾಡುವ ಮೂಲಕ ರ‍್ಯಾಪಿಡೋ ಸೇವೆ ಬಳಸುವವರ ಸುರಕ್ಷತೆಯ ಕುರಿತು ಪ್ರಶ್ನಿಸಿದ್ದಳು.
ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಕ್ರೌರ್ಯ ಖಂಡಿಸಿ ಶುಕ್ರವಾರ ಮಧ್ಯಾಹ್ನ ನಗರದ ಟೌನ್ಹಾಲ್ ಬಳಿ ನಡೆದಿದ್ದ ಪ್ರತಿಭಟನೆಗೆ ಯುವತಿ ಬಂದಿದ್ದರು. ಬಳಿಕ ಟೌನ್ ಹಾಲ್ನಿಂದ ಎಲೆಕ್ಟ್ರಾನಿಕ್ ಸಿಟಿಯ ತಮ್ಮ ಮನೆಗೆ ತೆರಳಲು ರ‍್ಯಾಪಿಡೋ ಆಟೋ ಬುಕ್ ಮಾಡಿದ್ದಳು. ಆದರೆ ಪದೇ ಪದೆ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ಬೈಕ್ ಆಯ್ಕೆ ಆಯ್ದುಕೊಂಡಿದ್ದಳು. ಆ್ಯಪ್ನಲ್ಲಿ ತೋರಿಸಿದ ನಂಬರಿನ ಬೈಕ್ ರಿಪೇರಿಯಲ್ಲಿದೆ ಎಂದಿದ್ದ ಚಾಲಕ ಬೇರೆ ಬೈಕಿನಲ್ಲಿ ಬಂದಿದ್ದ. ಬಳಿಕ ಮಾರ್ಗ ಮಧ್ಯೆ ನಿರ್ಜನ ಪ್ರದೇಶದಲ್ಲಿ ಒಂದೇ ಕೈಯಲ್ಲಿ ಚಾಲನೆ ಮಾಡುತ್ತ ಹಸ್ತಮೈಥುನ ಮಾಡಿಕೊಂಡಿದ್ದಾನೆ ಎಂದು ಯುವತಿ ಆರೋಪಿಸಿದ್ದಳು.
ಇಷ್ಟಾದರೂ ಸಹ ವಿಧಿಯಿರದೇ ಸುಮ್ಮನಿದ್ದ ಯುವತಿ, ಮನೆಗೆ 200 ಮೀಟರ್ ದೂರದಲ್ಲಿರುವಾಗಲೇ ರೈಡ್ ಮುಗಿಸಿ ಹಣ ಪಾವತಿಸಿ ಮನೆಗೆ ತೆರಳಿದ್ದಳು. ಆದರೆ ಡ್ರಾಪ್ ಮಾಡಿದ ನಂತರ ಪದೇ ಪದೆ ಆಕೆಗೆ ಕರೆ ಮಾಡಿದ್ದ ರ‍್ಯಾಪಿಡೋ ಬೈಕ್ ಕ್ಯಾಪ್ಟನ್ ಅಸಂಬದ್ಧವಾಗಿ ಮೆಸೇಜ್ ಮಾಡಿದ್ದಾನೆ. ಆರೋಪಿಯ ಕಿರುಕುಳದಿಂದ ನೊಂದಿರುವ ಯುವತಿ, ಆತ ಮೆಸೇಜ್ ಮಾಡಿರುವ ಸ್ಕ್ರೀನ್ ಶಾಟ್ ಸಮೇತ ಟ್ವೀಟ್ ಮಾಡುವ ಮೂಲಕ ತನಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಳು. ಅಲ್ಲದೇ ರ‍್ಯಾಪಿಡೋದ ಸುರಕ್ಷತೆಯ ಕುರಿತು ಪ್ರಶ್ನಿಸಿದ್ದಳು. ಯುವತಿಯ ಟ್ವೀಟ್ ಗಮನಿಸಿದ ಪೊಲೀಸರು ಆಕೆಯನ್ನ ಸಂಪರ್ಕಿಸಿ ಮಾಹಿತಿ ಪಡೆದಿದ್ದರು.
ಇಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸುವ ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ, "ಬೆಂಗಳೂರು ಪೊಲೀಸರು ಈ ರೀತಿಯ ಘಟನೆಗಳನ್ನು ಸಹಿಸುವುದಿಲ್ಲ. ನಾವು ಸದಾ ಕಾನೂನು ಕಾಪಾಡಲು ಬದ್ಧರಾಗಿದ್ದೇವೆ. ಆರೋಪಿಯ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತನನ್ನ ಬಂಧಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಪ್ರಾಂಶುಪಾಲರ ವಿರುದ್ಧ ಕಿರುಕುಳ ದೂರು: ಇನ್ನೊಂದೆಡೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ದಿನ ಎರಡು ಪೊಕ್ಸೊ ಪ್ರಕರಣಗಳು (ಜುಲೈ 20-2023) ದಾಖಲಾಗಿವೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಪ್ರಕರಣಗಳಾಗಿವೆ.
ಶಿವಮೊಗ್ಗದ ಪ್ರತಿಷ್ಟಿತ ಪಿಯು ಕಾಲೇಜಿನ ಪ್ರಾಂಶುಪಾಲರು ತಮ್ಮದೇ ಕಾಲೇಜಿನ ವಿದ್ಯಾರ್ಥಿನಿಯ ಜೊತೆ ಸಂಪರ್ಕ ಬೆಳೆಸಿದ್ದರು. ಪ್ರಾಂಶುಪಾಲರಿಗೆ 48 ವರ್ಷವಾಗಿದ್ದು, ವಿದ್ಯಾರ್ಥಿನಿಗೆ 17 ವರ್ಷ ವಯಸ್ಸಾಗಿದೆ. ಪಾಠ ಮಾಡುವ ವಿದ್ಯಾರ್ಥಿನಿಗೆ ನಂಬಿಸಿ, ಆಕೆಯ ಜೊತೆ ಸಂಪರ್ಕ ಬೆಳೆಸಿದ್ದರು. ಪ್ರಾಂಶುಪಾಲರು ಕಾಲೇಜಿನಲ್ಲಿ ಚೆನ್ನಾಗಿಯೇ ಪಾಠ ಮಾಡುತ್ತಿದ್ದರು. ಎಲ್ಲಾ ಮಕ್ಕಳು ಪ್ರಾಂಶುಪಾಲರ ಪಾಠವನ್ನು ಚೆನ್ನಾಗಿ ಆಲಿಸುತ್ತಿದ್ದರು. ಇದನ್ನ ಬಳಸಿಕೊಂಡ ಪ್ರಾಂಶುಪಾಲರು 17 ವರ್ಷದ ಅಪ್ರಾಪ್ತೆಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ: ರ‍್ಯಾಪಿಡೋ ಚಾಲಕನಿಂದ ಕಿರುಕುಳ ಆರೋಪ: ಟ್ವಿಟರ್ನಲ್ಲಿ ಅಳಲು ತೋಡಿಕೊಂಡ ಯುವತಿ