ಬೆಂಗಳೂರು: ವಿವಾಹವಾಗಿ ಮೂರು ತಿಂಗಳ ಅಂತರದಲ್ಲೇ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ (ಶುಕ್ರವಾರ) ನಡೆದಿದೆ. ಕೃಷ್ಣವೇಣಿ ಆತ್ಮಹತ್ಯೆಗೆ ಶರಣಾಗಿರುವ ಗೃಹಿಣಿ. ಬೆಳಗ್ಗೆ ವಿಚಾರ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಕಾಡುಗೋಡಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಸಂಪೂರ್ಣ ವಿವರ: ಮೂಲತಃ ಮೈಸೂರಿನ ಸಾಲಿಗ್ರಾಮದ ಕೃಷ್ಣವೇಣಿ 3 ತಿಂಗಳ ಹಿಂದೆ ಬೆಂಗಳೂರಿನ ಕುಂಬೇನ ಅಗ್ರಹಾರ ಮೂಲದ ಪೃಥ್ವಿರಾಜ್ ಎಂಬುವರೊಂದಿಗೆ ಹಸೆಮಣೆ ಏರಿದ್ದರು. ಪತಿ ಪೃಥ್ವಿರಾಜ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರೆ, ಪತ್ನಿ ಕೃಷ್ಣವೇಣಿ ಗೃಹಿಣಿಯಾಗಿದ್ದರು. ದಂಪತಿ ಕಾಡುಗೋಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ನಿನ್ನೆ(ಶುಕ್ರವಾರ) ಮನೆಯಲ್ಲಿ ಯಾರು ಇಲ್ಲದಿರುವಾಗ ಕೃಷ್ಣವೇಣಿ ಆತ್ಮಹತ್ಯೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ನಮ್ಮ ಮಗಳ ಸಾವಿಗೆ ಅಳಿಯನೇ ಕಾರಣ ಎಂದು ಮೃತಳ ಪೋಷಕರು ಆರೋಪಿಸಿ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ವೈದೇಹಿ ಆಸ್ಪತ್ತೆಗೆ ರವಾನಿಸಿದ್ದರು. ಈ ಬಗ್ಗೆ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಆತ್ಮಹತ್ಯೆ.. ಪತಿ ಮನೆ ಎದುರೇ ಶವದ ಅಂತ್ಯಕ್ರಿಯೆ ಮಾಡಿ ಪೋಷಕರ ಆಕ್ರೋಶ
ಇತ್ತೀಚಿನ ಆತ್ಮಹತ್ಯೆ ಪ್ರಕರಣಗಳು:
- ಯುವತಿ ಆತ್ಮಹತ್ಯೆ: ಅಶ್ಲೀಲ ವಿಡಿಯೋ ಮಾಡಿ, ಹರಿಬಿಡುವುದಾಗಿ ಯುವಕರಿಬ್ಬರು ಬೆದರಿಕೆ ಹಾಕಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಿಸದೇ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಸೆ. 4ರಂದು ದಾವಣಗೆರೆ ಜಿಲ್ಲೆಯ ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಸಾವಿಗೂ ಮುನ್ನ ಸಂತ್ರಸ್ತ ಯುವತಿ, ತನ್ನ ಸಾವಿಗೆ ಕಾರಣರಾದ ಮಧು ಮತ್ತು ನಾಗೇಂದ್ರಸ್ವಾಮಿ ವಿರುದ್ದ ಕ್ರಮ ಕೈಗೊಳ್ಳಿ ಎಂದು ಹೇಳಿರುವ ವಿಡಿಯೋ ವೈರಲ್ ಆಗಿತ್ತು. ಜಗಳೂರು ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬೆದರಿಕೆ : ಮನನೊಂದು ಯುವತಿ ಆತ್ಮಹತ್ಯೆ
- ಮಕ್ಕಳಿಗೆ ವಿಷ ಹಾಕಿ ತಂದೆ ಆತ್ಮಹತ್ಯೆ ಯತ್ನ: ಕೌಟುಂಬಿಕ ಕಲಹ ಹಿನ್ನೆಲೆ ಮೂವರು ಮಕ್ಕಳಿಗೆ ವಿಷ ಹಾಕಿ ತಂದೆ ಆತ್ಮಹತ್ಯೆ ಯತ್ನಿಸಿದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳದಲ್ಲಿ ಇತ್ತೀಚೆಗೆ ನಡೆದಿತ್ತು. ಮೂವರು ಮಕ್ಕಳ ಪೈಕಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಒಂದು ಮಗು ಹಾಗೂ ತಂದೆ ಭೀರಣ್ಣ ಮಸಬಿನಾಳ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಬಸವನಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರತಿದಿನ ಮನೆಯಲ್ಲಿ ಪತಿ-ಪತ್ನಿಯ ನಡುವೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತಿದ್ದ ಪತಿ ಭೀರಣ್ಣ ಸೆ.2ರಂದು ಪತ್ನಿ ಮನೆಯಲ್ಲಿ ಇರದ ಕಾರಣ ಮಕ್ಕಳಿಗೆ ಹಾಲಿನಲ್ಲಿ ವಿಷ ಬೆರೆಸಿ ಕೊಟ್ಟು ತಾನು ವಿಷ ಸೇವಿಸಿದ್ದ. ಮಕ್ಕಳ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಆಗಮಿಸಿ ತಕ್ಷಣ ಮನಗೂಳಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಬ್ಬರು ಮಕ್ಕಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ವಿಜಯಪುರ: ಮಕ್ಕಳಿಗೆ ವಿಷ ಹಾಕಿ ತಂದೆ ಆತ್ಮಹತ್ಯೆ ಯತ್ನ, ಇಬ್ಬರು ಕಂದಮ್ಮಗಳು ಸಾವು