ಬೆಂಗಳೂರು: ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗೆ ಖಾತಾ ನೀಡಲು ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ಮಧ್ಯವರ್ತಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಿಬಿಎಂಪಿ ಕಚೇರಿಯಲ್ಲಿ ಮಹಾದೇಪುರ ವಲಯದ ರೆವಿನ್ಯೂ ಇನ್ಸ್‌ಪೆಕ್ಟರ್ ನಟರಾಜ್ ಅವರ ಪರ 5 ಲಕ್ಷ ರೂ ಲಂಚ ಪಡೆಯುತ್ತಿದ್ದ ಪವನ್ ಎಂಬಾತನನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮುಕ್ತಾ ಡೆವಲಪರ್ಸ್ ಹೆಸರಿನ ಕಂಪನಿ ಕೊಡಿಗೆಹಳ್ಳಿಯಲ್ಲಿ ಬೃಂದಾವನ್ ಅಪಾರ್ಟ್‌ಮೆಂಟ್ ನಿರ್ಮಿಸಿದ್ದು, 79 ಫ್ಲ್ಯಾಟ್‌ಗಳಿಗೆ ಖಾತೆಗಾಗಿ ಅರ್ಜಿ ಸಲ್ಲಿಸಿತ್ತು. ರವಿನ್ಯೂ ಇನ್ಸ್‌ಪೆಕ್ಟರ್ ನಟರಾಜ್, ಪ್ರತಿ ಖಾತಾಗೆ 10 ಸಾವಿರದಂತೆ ಒಟ್ಟು 7.90 ಲಕ್ಷ ರೂ ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಮುಕ್ತಾ ಡೆವಲಪರ್ಸ್ ಮಾಲೀಕ ಮಂಜುನಾಥ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ, ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಪೊಲೀಸರ ತಂಡ ಇಂದು ಮಹಾದೇವಪುರ ಬಿಬಿಎಂಪಿ ಕಚೇರಿಯಲ್ಲೇ ಲಂಚ ಸ್ವೀಕರಿಸುತ್ತಿದ್ದ ನಟರಾಜ್ ಹಾಗೂ ಪವನ್ನನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಬಿಬಿಎಂಪಿಯ ಕಂದಾಯ ಹಾಗೂ ನಗರ ಯೋಜನಾ ವಿಭಾಗಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ನಗರದ 45 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಕಡತ ವಿಲೇವಾರಿಗೆ ವಿಳಂಬ, ಖಾತಾ ಬದಲಾವಣೆ ಹಾಗೂ ಕಟ್ಟಡ ನಿರ್ಮಾಣಕ್ಕೆ ನಿರಾಕ್ಷೇಪಣ ಪತ್ರ ಪಡೆಯಲು ಲಂಚ ಕೇಳುತ್ತಿರುವ ಬಗ್ಗೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಿದ್ದರು. ಮಾಹಿತಿ ಕಲೆಹಾಕಿದ ಲೋಕಾಯುಕ್ತ ಅಧಿಕಾರಿಗಳ ತಂಡ ಬಿಬಿಎಂಪಿಯ ಎಲ್ಲ ವಲಯಗಳ ಆರ್ಒ, ಎಆರ್ಒ, ಎಡಿಟಿಪಿ ಕಚೇರಿಗಳು ಸೇರಿದಂತೆ 45 ಕಡೆಗಳಲ್ಲಿ ದಾಳಿ ನಡೆಸಿದೆ ಪರಿಶೀಲನೆ ನಡೆಸುತ್ತಿದೆ.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಆರ್ಒ, ಎಆರ್ಒ, ಎಡಿಟಿಪಿ ಕಚೇರಿಗಳು, ರೆವಿನ್ಯೂ ಮತ್ತು ನಗರ ಯೋಜನಾ ಕಚೇರಿಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ನಿನ್ನೆ ಸಂಜೆ ನಾಲ್ಕು ಗಂಟೆಗೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಹಾಗೂ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿಕ್ಷಕಿಗೆ ಹಣದ ಬೇಡಿಕೆ; ಆರೋಪಿ ಬಂಧನ: ಟೆಲಿಗ್ರಾಂ ಆ್ಯಪ್ನ ನಕಲಿ ಖಾತೆಯ ಮೂಲಕ ಸಂದೇಶ ಕಳುಹಿಸಿ 3 ಲಕ್ಷ ನಗದು ಬೇಡಿಕೆ ಇಟ್ಟಿದ್ದ ಆರೋಪಿಯನ್ನು ವೇಣೂರು ಠಾಣೆ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವತ್ ಹೆಬ್ಬಾರ್ (23) ಲಕ್ಷ ನಗದು ವಸೂಲಿ ಮಾಡಿದ್ದ ಆರೋಪಿ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ನಿವಾಸಿ, ಪೆರೋಡಿತ್ತಾಯಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿ ಅವರಿಗೆ ನಕಲಿ ಟೆಲಿಗ್ರಾಂ ಖಾತೆಯ ಮೂಲಕ ರೂ. ಮೂರು ಲಕ್ಷ ಕೊಡುವಂತೆ ಬೇಡಿಕೆ ಇಟ್ಟು, ಹಣ ನೀಡದೇ ಇದ್ದರೆ ಗಂಡನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ಜ್ಯೋತಿ ಅವರು ವೇಣೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.
ಇದನ್ನೂಓದಿ: ಆನ್ ಲೈನ್ ಗೇಮ್ ವಂಚನೆ ಕೇಸ್.. ಬುಕ್ಕಿ ಮನೆ ಮೇಲೆ ದಾಳಿ, 31 ಕೋಟಿ ವಶ