ಬೆಂಗಳೂರು: ಹಣ ಕೇಳುವ ನೆಪದಲ್ಲಿ ವೃದ್ಧನ ಮೊಬೈಲ್ ಫೋನ್, ವ್ಯಾಲೆಟ್ ದೋಚಿದ್ದ ಮಂಗಳಮುಖಿಯರ ಸಹಿತ ನಾಲ್ವರು ಆರೋಪಿಗಳನ್ನು ಕೊಡಿಗೆಹಳ್ಳಿ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ಸ್ನೇಹಾ, ಅವಿಷ್ಕಾ, ದೀಪಿಕಾ ಹಾಗೂ ಪ್ರಕಾಶ್ ಬಂಧಿತರು.
ಆರೋಪಿಗಳು ಕೆಲಸಕ್ಕೆ ತೆರಳುವ ಟೆಕ್ಕಿಗಳು, ರಸ್ತೆಬದಿ ಒಂಟಿಯಾಗಿ ಸಿಗುವವರ ಬಳಿ ಹಣ ಕೇಳುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದರು. ಕಳೆದ ಭಾನುವಾರ ಇದೇ ರೀತಿ ಏರ್‌ಪೋರ್ಟ್‌ಗೆ ತೆರಳಲು ಹೆಬ್ಬಾಳ ಫ್ಲೈಓವರ್ ಬಳಿ ಕಾದು ನಿಂತಿದ್ದ 70 ವರ್ಷದ ವೃದ್ಧನ ಬಳಿ ಬಂದಿದ್ದ ಮಂಗಳಮುಖಿಯರು ಹಣ ಕೇಳಿದ್ದಾರೆ. ಹಣ ನೀಡಿದಾಗ, ಇಷ್ಟು ಹಣ ಸಾಕಾಗದು ಎಂದು ಆತನ ಬಳಿಯಿದ್ದ ಮೊಬೈಲ್ ಫೋನ್, ವ್ಯಾಲೆಟ್ ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೊಡಿಗೇಹಳ್ಳಿ ಠಾಣಾ ಪೊಲೀಸರು ಕಾರ್ಯಾಚರಣೆ ಕೈಗೊಂಡು ರೆಡ್ ಹ್ಯಾಂಡ್ ಆಗಿ ಸುಲಿಗೆಕೋರರ ಗುಂಪನ್ನು ಬಂಧಿಸಿದ್ದಾರೆ.
ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿ, "ವೃದ್ಧರೊಬ್ಬರು ಏರ್‌ಪೋರ್ಟ್‌ಗೆ ಹೋಗಲೆಂದು ಬೆಳಗಿನ ಜಾವ 6 ಗಂಟೆಯ ಸುಮಾರಿಗೆ ಫ್ಲೈಓವರ್ ಬಳಿ ಕಾದು ನಿಂತಿದ್ದರು. ಈ ವೇಳೆ ಮೂರು ಜನ ಮಂಗಳಮುಖಿಯರು ವೃದ್ಧನ ಬಳಿ ತೆರಳಿ ಹಣ ಕೇಳಿದ್ದಾರೆ. ಆಗ ವೃದ್ದ ವ್ಯಕ್ತಿ ಸ್ವಲ್ಪ ಹಣ ನೀಡಿದ್ದಾರೆ. ಇಷ್ಟು ಕಡಿಮೆ ಹಣ ನಮಗೆ ಸಾಕಾಗಲ್ಲ ಎಂದು ಅವರ ಬಳಿ ಇದ್ದಂತಹ ವ್ಯಾಲೆಟ್ ಮತ್ತು ಮೊಬೈಲ್ ಅಲ್ಲಿಂದ ಮೂರೂ ಜನ ಪರಾರಿಯಾಗಿದ್ದಾರೆ. ಇದರ ಆಧಾರದ ಮೇಲೆ ಆರೋಪಿತರ ವಿರುದ್ಧ ಐಪಿಸಿ ಸೆಕ್ಷನ್ 392ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ."
"ತನಿಖೆ ಆರಂಭಿಸಿದ ವೇಳೆ ಕೃತ್ಯದಲ್ಲಿ ಒಟ್ಟು ನಾಲ್ವರು ಭಾಗಿಯಾಗಿರುವುದು ತಿಳಿದುಬಂತು. ಮೂವರು ಮಂಗಳಮುಖಿಯರ ಜೊತೆ ಪ್ರಕಾಶ್ ಎಂಬವನೂ ಸೇರಿದ್ದ. ಹೀಗಾಗಿ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿ ಪ್ರಕಾಶ್ ಬಳಿ ಆಟೋ ಇದ್ದು ನಾಲ್ವರು ಸೇರಿ ಬೆಳಗಿನ ಜಾವ 5 ರಿಂದ 8 ರವರೆಗೆ ವಿವಿಧ ಪ್ರದೇಶಗಳಿಗೆ ತೆರಳಿ ಒಂಟಿಯಾಗಿರುವವರನ್ನು ಗಮನಿಸಿ ಈ ರೀತಿಯ ಕೃತ್ಯಗಳನ್ನು ಎಸಗುತ್ತಿದ್ದರು. ಈ ಹಿಂದೆಯೂ ಇಂತಹ ಕೃತ್ಯದಲ್ಲಿ ಆರೋಪಿತರ ಮೇಲೆ ಬೇರೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ" ಎಂದು ಡಿಸಿಪಿ ಮಾಹಿತಿ ನೀಡಿದರು.
ಇದನ್ನೂ ಓದಿ: Businessman robbed: ಬಂದೂಕು ತೋರಿಸಿ ಉದ್ಯಮಿಯ ದರೋಡೆ, ಕಾರು ಅಡ್ಡಗಟ್ಟಿ 2 ಲಕ್ಷದ ಬ್ಯಾಗ್ ದೋಚಿದ ಕಳ್ಳರು!