ಬೆಂಗಳೂರು: ಚಿಕಿತ್ಸೆ ನೆಪದಲ್ಲಿ ಯುವತಿ ಖಾಸಗಿತನಕ್ಕೆ ಧಕ್ಕೆ ತಂದ ಆರೋಪದ ಮೇಲೆ ರಾಜಿನಗರದ ಕಾಸ್ಮೆಟಿಕ್ ಸೆಂಟರ್ ವಿರುದ್ಧ ಸುಬ್ರಮಣ್ಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಖಾಸಗಿ ಕಾಲೇಜಿನ 18 ವರ್ಷದ ವಿದ್ಯಾರ್ಥಿನಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಸಂತ್ರಸ್ತೆ, ಬೊಜ್ಜು ಕಡಿಮೆ ಮಾಡಿಸಿಕೊಳ್ಳುವ ಸಲುವಾಗಿ ಮೇ 20ರಂದು ಸಹೋದರನ ಜೊತೆಗೆ ದೂರುದಾರರು ಕಾಸ್ಮೆಟಿಕ್ ಸೆಂಟರ್‌ಗೆ ಬಂದಿದ್ದಾರೆ.
ವೈದ್ಯರ ಸಲಹೆ ಮೇರೆಗೆ ಮಹಿಳಾ ನರ್ಸ್‌ಗಳು ಕೋಣೆಗೆ ಸಂತ್ರಸ್ತೆಯನ್ನು ಕರೆದೊಯ್ದು ಮೇಲುಡುಪು ಬಿಚ್ಚಿಸಿ ಪರೀಕ್ಷೆ ಮಾಡಿದ್ದಾರೆ. ಪರೀಕ್ಷೆ ಮುಗಿಸಿ ಮನೆಗೆ ಹೊರಡುವಾಗ ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮರಾ ಇರುವುದನ್ನು ಯುವತಿ ಗಮನಿಸಿದ್ದಾಳೆ. ಮಾರನೇ ದಿನ ಕ್ಯಾಮರ ನೆನಪಾಗಿ ತನ್ನ ಸಹೋದರನಿಗೆ ವಿಚಾರ ತಿಳಿಸಿದ್ದಾಳೆ.
ಸಹೋದರ ಆಸ್ಪತ್ರೆಗೆ ಕರೆ ಮಾಡಿ ಸಿಸಿ ಕ್ಯಾಮರಾದ ದೃಶ್ಯಾವಳಿ ಡಿಲೀಟ್ ಮಾಡುವಂತೆ ತಾಕೀತು ಮಾಡಿದ್ದಾರೆ. ಆಪರೇಷನ್ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸರ್ಕಾರದ ಆದೇಶವಿದೆ. ದೃಶ್ಯಾವಳಿ ಡಿಲೀಟ್ ಮಾಡಲು ಸಾಧ್ಯವಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ ಎನ್ನಲಾಗಿದೆ.
ಇದರಿಂದ ನೊಂದ ಯುವತಿ, ಆಸ್ಪತ್ರೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳಿಂದ ನನ್ನ ಖಾಸಗಿ ತನಕ್ಕೆ ಧಕ್ಕೆಯಾಗಿದೆ. ಆಸ್ಪತ್ರೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಇದರ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಧ್ಯಾರ್ಥಿನಿಯರೊಂದಿಗೆ ಶಿಕ್ಷಕ ಅಸಭ್ಯ ವರ್ತನೆ: ಇನ್ನು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕನನ್ನು ಅಮಾನತು ಗೊಳಿಸಲಾಗಿತ್ತು. ಶಿಕ್ಷಕನ ವರ್ತನೆಯ ವಿರುದ್ಧ ಕೋಪಗೊಂಡ ಗ್ರಾಮಸ್ಥರು ಶಾಲೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪರಿಶೀಲನೆ ನಡೆಸಿದ್ದ ಮಧುಗಿರಿ ಬಿಇಒ ಶಿಕ್ಷಕ ಮಂಜುನಾಥ್ ಅವರನ್ನು ಅಮಾನತುಗೊಳಿಸಿದ್ದರು. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಶಾಲೆಯ ಸಹ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು ಥಳಿಸಿದ್ದರು. ಪ್ರತಿನಿತ್ಯ ಮೈ ಮುಟ್ಟಿ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ವಿದ್ಯಾರ್ಥಿನಿಯರು ಪೋಷಕರಿಗೆ ತಿಳಿಸಿದ್ದರು. ಈ ಹಿನ್ನೆಲೆ ಶಾಲೆ ಆರಂಭಕ್ಕೂ ಮುನ್ನ ಶಿಕ್ಷಕರನ್ನು ತಡೆದು ಪೋಷಕರು ವಿಚಾರಿಸಿದ್ದರು. ಬಳಿಕ ಆತನಿಗೆ ಥಳಿಸಿ, ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಈ ಬಗ್ಗೆ ದೂರು ಸಹ ದಾಖಲಾಗಿತ್ತು
ಇದನ್ನೂ ಓದಿ: Youtuber: ವಿದೇಶಿ ಯೂಟ್ಯೂಬರ್ಗೆ ಬೆಂಗಳೂರಿನಲ್ಲಿ ಕಿರುಕುಳ ಆರೋಪ; ಆರೋಪಿ ಬಂಧನ