ಬೆಂಗಳೂರು: ನಗರದ ಹೊರವಲಯದ ಕನಕಪುರ ರಸ್ತೆಯಲ್ಲಿ ಸಿಕ್ಕ ಕೋಟ್ಯಂತರ ರೂಪಾಯಿ ಮೌಲ್ಯದ 2 ಸಾವಿರ ಮುಖಬೆಲೆಯ ಸುಮಾರು 10 ಕೋಟಿ ರೂ ಫೋಟೋಕಾಪಿ ಮಾಡಿದ ನೋಟುಗಳು ಪೊಲೀಸರ ಅನುಮಾನಕ್ಕೆ ಕಾರಣವಾಗಿವೆ. ನಕಲಿ ನೋಟುಗಳ ಮೂಲದ ಹಿಂದೆ ಬಿದ್ದಿರುವ ಪೊಲೀಸರಿಗೆ ನಾನಾ ಅನುಮಾನಗಳು ಕಾಡುತ್ತಿವೆ.
ರೈಸ್ ಪುಲ್ಲಿಂಗ್ ದಂಧೆಕೋರರ ಕೈಚಳಕ? : ಫೋಟೋಕಾಪಿ ಮಾಡಿರುವ ಹಣದ ಪಕ್ಕದಲ್ಲೇ ಒಂದು ಚೊಂಬು ದೊರೆತಿರುವುದು ಪೊಲೀಸರ ಅನುಮಾನವನ್ನು ರೈಸ್ ಪುಲ್ಲಿಂಗ್ ದಂಧೆಯತ್ತ ಹೊರಳಿಸಲು ಕಾರಣವಾಗಿದೆ. ರೈಸ್ ಪುಲ್ಲಿಂಗ್ ದಂಧೆಗೆ ಬಳಸಿರುವ ಸಾಧ್ಯತೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಪೊಲೀಸರ ಗಮನ ಬೇರೆಡೆ ಸೆಳೆಯಲು ಚೊಂಬು ಇಟ್ಟಿರಬಹುದು ಎಂಬ ಆಯಾಮದಲ್ಲಿಯೂ ಸಹ ತಲಘಟ್ಟಪುರ ಠಾಣಾ ಪೊಲೀಸರ ತನಿಖೆ ಪ್ರಗತಿಯಲ್ಲಿದೆ.
ವೆಬ್ ಸಿರೀಸ್ ನೋಡಿ ಹಣ ಜೆರಾಕ್ಸ್ ಮಾಡಿರುವ ಶಂಕೆ: ಆರೋಪಿಗಳು ಇತ್ತೀಚಿಗೆ ತೆರೆ ಕಂಡ ಶಾಹಿದ್ ಕಪೂರ್, ವಿಜಯ್ ಸೇತುಪತಿ ಮುಖ್ಯಭೂಮಿಕೆಯ ಫರ್ಜಿ ವೆಬ್ ಸಿರೀಸ್ಗಳಿಂದ ಪ್ರೇರಿತರಾಗಿ ನಕಲಿ ಹಣದ ದಂಧೆಗಿಳಿದಿದ್ದಾರಾ? ಎಂಬ ಅನುಮಾನ ಸಹ ಪೊಲೀಸರಿಗೆ ಬಲವಾಗಿದೆ. ವೆಬ್ ಸಿರೀಸ್ ಕಥಾ ಹಂದರದಂತೆ 500 ರ ಮುಖಬೆಲೆಯ ಅಸಲಿ ನೋಟನ್ನು ಪಡೆದು 2000 ಮುಖಬೆಲೆಯ ನಕಲಿ ನೋಟು ನೀಡುತ್ತಿರಬಹುದು. ಆದರೆ ಪ್ರಸ್ತುತ 2000 ಮುಖಬೆಲೆಯ ನೋಟು ಚಲಾವಣೆಯಲ್ಲಿಲ್ಲ ಎಂಬ ಕಾರಣಕ್ಕೆ ಎಸೆದು ಹೋಗಿರಬಹುದು ಎಂಬುದು ಪೊಲೀಸರ ಶಂಕೆ.
ಜುಲೈ 25ರಂದು ನಗರದ ಹೊರವಲಯದ ಕನಕಪುರ ರಸ್ತೆಯಲ್ಲಿ 10 ಕೋಟಿ ರೂಪಾಯಿ ಮೌಲ್ಯದ 2 ಸಾವಿರ ಮುಖಬೆಲೆಯ ಫೋಟೋಕಾಪಿ ಮಾಡಿದ ನೋಟುಗಳು ಪತ್ತೆಯಾಗಿದ್ದವು. ಎರಡು ಬಾಕ್ಸ್ಗಳಲ್ಲಿ ಎರಡು ಸಾವಿರ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದವು. ರಸ್ತೆಯ ಬದಿಯಲ್ಲಿ ಅನುಮಾನಾಸ್ಪದ ಬಾಕ್ಸ್ಗಳನ್ನು ನೋಡಿದ ಸ್ಥಳೀಯರು ಅಲ್ಲೇ ಹತ್ತಿರದಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸ್, ಬಳಿಕ ತಲಘಟ್ಟಪುರ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಅಲ್ಲಿಗೆ ಬಂದ ತಲಘಟ್ಟಪುರ ಪೊಲೀಸರು, ಬಾಕ್ಸ್ಗಳನ್ನು ಬಿಚ್ಚಿ ಪರಿಶೀಲನೆ ಮಾಡಿದ್ದರು. ಆಗ ಬಾಕ್ಸ್ಗಳ ಒಳಗೆ 2000 ರೂ ಮುಖ ಬೆಲೆಯ ಕಂತೆ- ಕಂತೆ ನೋಟುಗಳು ದೊರಕಿತ್ತು. ನೋಟುಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ ಅವುಗಳು ಅಸಲಿಯಲ್ಲಿ ನಕಲಿ ನೋಟುಗಳು ಎಂಬುದು ಬಯಲಾಗಿತ್ತು.
ಇದನ್ನೂ ಓದಿ: ಬೆಂಗಳೂರು: ರಸ್ತೆ ಬದಿಯಲ್ಲಿ ಸಿಕ್ಕ 2 ಸಾವಿರ ಮುಖ ಬೆಲೆಯ ಗರಿ ಗರಿ ನೋಟುಗಳು.. ಹತ್ತಿರ ಹೋಗಿ ನೋಡಿದಾಗ ಗೊತ್ತಾಯ್ತು ಅಸಲಿಯತ್ತು!