ಬೆಂಗಳೂರು: ಸಿನಿಮೀಯ ಮಾದರಿಯಲ್ಲಿ ಗೂಡ್ಸ್ ವಾಹನವನ್ನೇ ಕಂಪಾರ್ಟ್ಮೆಂಟ್ ಮಾಡಿಕೊಂಡು ಆಂಧ್ರಪ್ರದೇಶ - ಒಡಿಶಾ ಗಡಿ ಭಾಗಗಳಲ್ಲಿ ಸ್ಥಳೀಯರಿಂದ ಗಾಂಜಾ ಖರೀದಿಸಿ, ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದ ಮೂವರು ಖದೀಮರನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಬರೋಬ್ಬರಿ 12 ಕೋಟಿ ಮೌಲ್ಯದ 1500 ಕೆಜಿ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಸಲ್ಮಾನ್, ಆತನಿಗೆ ಗಾಂಜಾ ಪೂರೈಸುತ್ತಿದ್ದ ರಾಜಸ್ಥಾನ ಮೂಲದ ಚಂದ್ರಭಾನ್ ಬಿಷ್ಣೋಯಿ ಹಾಗೂ ಆಂಧ್ರಪ್ರದೇಶ ಮೂಲದ ಲಕ್ಷ್ಮಿ ಮೋಹನ್ ದಾಸ್ ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಮುಖ ಆರೋಪಿಯಾಗಿರುವ ಚಂದ್ರಭಾನ್ ಬಿಷ್ಣೋಯಿ ಎಂಬಿಎ ವ್ಯಾಸಂಗ ಮಾಡಿದ್ದರೆ, ಲಕ್ಷ್ಮಿ ಮೋಹನ್ ದಾಸ್ ಬಿ.ಎ ಪದವೀಧರನಾಗಿದ್ದ. ಆದರೆ ಇಬ್ಬರೂ ಸಹ ಅಂತರ್ ರಾಜ್ಯ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚಿಗೆ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿತನಾಗಿದ್ದ ಸಲ್ಮಾನ್ ಎಂಬ ಆರೋಪಿಯನ್ನ ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು, ವಿಚಾರಣೆ ನಡೆಸಿದಾಗ ಅಂತರ್ ರಾಜ್ಯ ಮಾದಕ ಜಾಲ ಪತ್ತೆಯಾಗಿತ್ತು. ಬಳಿಕ ಆಂಧ್ರಪ್ರದೇಶದ ವಿಖಾಪಟ್ಟಣಂಗೆ ತೆರಳಿ ಮೂರು ವಾರಗಳ ಕಾಲ ಮಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳಾದ ಚಂದ್ರಭಾನ್ ಬಿಷ್ಣೋಯಿ ಹಾಗೂ ಲಕ್ಷ್ಮಿ ಮೋಹನ್ ದಾಸ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗದ್ದಾರೆ.
ಮಾದಕ ವಸ್ತು ಸಾಗಾಟಕ್ಕೆ ವಾಹನ ಮಾರ್ಪಾಡು: ಪುಷ್ಪ ಚಿತ್ರದ ಮಾದರಿಯಲ್ಲಿ ಕೃತ್ಯ ಎಸಗುತ್ತಿದ್ದ ಆರೋಪಿಗಳು ರಾಜಸ್ಥಾನ ನೋಂದಣಿಯ ಗೂಡ್ಸ್ ವಾಹನ ಹೊಂದಿದ್ದು, ಗಾಂಜಾ ಸಾಗಿಸಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದರು. ವಾಹನಕ್ಕೆ ವಿವಿಧ ನಕಲಿ ನಂಬರ್ ಪ್ಲೇಟ್ ಬಳಸುತ್ತಿದ್ದರು. ಅಲ್ಲದೇ ಸಿನಿಮಾ ಮಾದರಿಯಲ್ಲಿ ವಾಹನದ ಗೂಡ್ಸ್ ಕಂಪಾರ್ಟ್ಮೆಂಟ್ನ ಕೆಳಗಡೆ ಮತ್ತೊಂದು ಸೀಕ್ರೆಟ್ ಕಂಪಾರ್ಟ್ಮೆಂಟ್ ಮಾಡಿಸಿಕೊಂಡಿದ್ದರು. ಗಾಂಜಾ ಸಾಗಿಸುವಾಗ ಮೇಲಿನ ಗೂಡ್ಸ್ ಕಂಪಾರ್ಟ್ಮೆಂಟ್ ಭಾಗದಲ್ಲಿ ಪ್ಲಿಪ್ ಕಾರ್ಟ್ ಪಾರ್ಸೆಲ್ ಬಾಕ್ಸ್ ಗಳಲ್ಲಿಯೂ ಗಾಂಜಾ ಇರಿಸಿ ಸಾಗಿಸುತ್ತಿದ್ದುದು ಸಹ ತಿಳಿದುಬಂದಿದೆ.
ಪ್ರಕರಣದ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಸಿಸಿಬಿ ಪೊಲೀಸರ ಕಾರ್ಯವನ್ನು ಶ್ಲಾಘಿಸುತ್ತಾ "ಬೆಂಗಳೂರಿಗೆ ಬಂದು ಸೇರುತ್ತಿದ್ದ ಬಹುತೇಕ ಗಾಂಜಾದ ಹಿಂದೆ ಇದೇ ಆರೋಪಿಗಳ ಕೈವಾಡ ಇರುವುದು ಪತ್ತೆಯಾಗಿದೆ. ಇದು ಕರ್ನಾಟಕ ಪೊಲೀಸರು ಜಪ್ತಿ ಮಾಡಿದ ಅತಿ ದೊಡ್ಡ ಪ್ರಮಾಣದ ಮಾದಕ ಪ್ರಕರಣಗಳಲ್ಲಿ ಒಂದು. ಈಗಾಗಲೇ ಮಾದಕ ಪದಾರ್ಥಗಳ ವಿರುದ್ಧದ ಸಮರದ ಭಾಗವಾಗಿ ಆರು ನೂರಕ್ಕೂ ಅಧಿಕ ಶಾಲಾ ಕಾಲೇಜುಗಳಲ್ಲಿ ಬೆಂಗಳೂರು ಪೊಲೀಸರು ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಮುಂದೆಯೂ ಸಹ ಮಾದಕ ಪದಾರ್ಥಗಳ ವಿರುದ್ಧ ನಮ್ಮ ಸಮರ ಮುಂದುವರೆಯಲಿದೆ" ಎಂದಿದ್ದಾರೆ.
ಇದನ್ನೂ ಓದಿ: Bengaluru crime: ಮನೆಯಲ್ಲಿ ಗಂಡು, ರಸ್ತೆಯಲ್ಲಿ ಹೆಣ್ಣು.. ಐಷಾರಾಮಿ ಜೀವನಕ್ಕಾಗಿ ವೇಷ ಧರಿಸಿದ್ದ ಆರೋಪಿ ಅಂದರ್
79 ಕೆಜಿ ಗಾಂಜಾ ಜಪ್ತಿ: ಇತ್ತೀಚಿಗೆ, ಆಂಧ್ರಪ್ರದೇಶ ಹಾಗೂ ಒಡಿಶಾ ಸೇರಿ ವಿವಿಧ ರಾಜ್ಯಗಳಿಂದ ನಗರಕ್ಕೆ ತಂದು ಗಾಂಜಾ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಮಹಿಳೆ ಸೇರಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಿ. 79 ಕೆ.ಜಿ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ರೈಲು ಹಾಗೂ ಬಸ್ ಮಾರ್ಗವಾಗಿ ನಗರದಲ್ಲಿ ಅವ್ಯವಾಹತವಾಗಿ ನಗರಕ್ಕೆ ತಂದು ಸಣ್ಣ ಪೊಟ್ಟಣಗಳಲ್ಲಿ ಇಟ್ಟು ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಮಧುಸ್ಮಿತಾ, ನರೇಶ್, ದಿಲ್ಮಾಜ್, ಸುಬ್ರತ್ ಪ್ರಧಾನ್, ರಾಜ್ ಮೋಹನ್ ಹಾಗೂ ಲಕ್ಷ್ಮೀಕಾಂತ್ ಸೇರಿ ಒಟ್ಟು 8 ಮಂದಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.