ಬೆಂಗಳೂರು: ಪ್ರೀ ಆ್ಯಕ್ಟಿವೇಟೆಡ್ ಸಿಮ್ ಕಾರ್ಡ್ಸ್ ಬಳಸಿಕೊಂಡು ಆ್ಯಪ್ ಆಧಾರಿತ ಕ್ಯಾಬ್, ಟ್ಯಾಕ್ಸಿ ಸೇವೆ ನೀಡುತ್ತಿದ್ದ ಕಂಪನಿಗಳಿಗೆ ವಂಚಿಸುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮನೋಜ್ ಕುಮಾರ್, ಸಚಿನ್ ಹಾಗೂ ಶಂಕರ್ ಬಂಧಿತರು.
ಈ ಪೈಕಿ ಮನೋಜ್ ಕುಮಾರ್ ಊಬರ್ ಹಾಗೂ ರ‍್ಯಾಪಿಡೋ ಕಂಪನಿಗಳಿಗೆ ಚಾಲಕರನ್ನು ಒದಗಿಸುವ ವೆಂಡರ್ಶಿಪ್ ಪಡೆದಿದ್ದ. ಸಚಿನ್ ಫೈನಾನ್ಸ್ ಕಂಪನಿಗಳಿಂದ ಲೋನ್ ಕೊಡಿಸುವ ಕೆಲಸ ಮಾಡುತ್ತಿದ್ದರೆ, ಶಂಕರ್ ವಿ ಕಂಪನಿಯ ಸಿಮ್ ಕಾರ್ಡ್ಸ್ ಡಿಸ್ಟ್ರಿಬ್ಯೂಷನ್ ಮಾಡುತ್ತಿದ್ದ. ವಂಚನೆಗೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನು ಹೊಂದಿದ್ದ ಈ ಮೂವರೂ ಸೇರಿಕೊಂಡು ಮೊದಲು ನಕಲಿ ದಾಖಲಾತಿಗಳನ್ನು ನೀಡಿ ವಿವಿಧ ಹೆಸರಿನಲ್ಲಿ ಚಾಲಕರ ಪ್ರೊಫೈಲ್ ಸೃಷ್ಟಿಸುತ್ತಿದ್ದರು. ಪ್ರೀ ಆ್ಯಕ್ಟಿವೇಟೆಡ್ ಸಿಮ್ ಕಾರ್ಡ್ಸ್ ಬಳಸಿ ನಕಲಿ ರೈಡ್ ಬುಕ್ ಮಾಡುತ್ತಿದ್ದರು. ನಂತರ ಸಾಫ್ಟ್‌ವೇರ್ ಬಳಸಿಕೊಂಡು ವಾಹನ, ಚಾಲಕ, ಗ್ರಾಹಕರೇ ಇರದಿದ್ದರೂ ನಕಲಿ ರೈಡ್ ತೋರಿಸಿ ಕ್ಯಾಶ್ ಪೇಮೆಂಟ್ ಪಡೆದಿರುವಂತೆ ಊಬರ್ ಹಾಗೂ ರ‍್ಯಾಪಿಡೋ ಕಂಪನಿಗಳಿಗೆ ವಂಚಿಸುತ್ತಿದ್ದರು. ದಿನಕ್ಕಿಷ್ಟು ಎಂದು ನಿಗದಿತ ರೈಡ್ಗಳನ್ನು ಮಾಡಿದಾಗ ಸಹಜವಾಗಿಯೇ ಆರೋಪಿಗಳಿಗೆ ಇನ್ಸೆಂಟಿವ್ ಸಿಗುತ್ತಿತ್ತು.
ಈ ಕೃತ್ಯಕ್ಕಾಗಿ ಆರೋಪಿಗಳು ಸಾರ್ವಜನಿಕರು ಸಿಮ್ ಕಾರ್ಡ್ ಖರೀದಿಗೆ, ಲೋನ್ ಪಡೆಯುವುದಕ್ಕೆ ನೀಡುವ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 1,055 ಪ್ರೀ ಆ್ಯಕ್ಟಿವೇಟೆಡ್ ಸಿಮ್ ಕಾರ್ಡ್ಸ್, 15 ಮೊಬೈಲ್ ಫೋನ್‌ಗಳು, 4 ಲ್ಯಾಪ್ ಟಾಪ್ಸ್, ಕಂಪ್ಯೂಟರ್ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಕಳೆದ ಒಂದು ವರ್ಷದಿಂದ ಈ ಕೃತ್ಯ ನಡೆಸುತ್ತಾ ಬಂದಿದ್ದರು. ಸುಮಾರು 10 ಲಕ್ಷ ರೂ.ಗೂ ಮೀರಿ ವಂಚನೆ ಮಾಡಿರುವ ಸಾಧ್ಯತೆ ಇದೆ. ಹಣಕ್ಕಿಂತ ಮುಖ್ಯವಾದದ್ದು ಅವರು ಬಳಸಿದ ಎಂಒ ಎಂಬ ಸಾಧನ. ಇದೊಂದು ವಿನೂತನ ಸಾಧನ. ನಮ್ಮ ರಾಜ್ಯದಲ್ಲಿ ಈ ಹಿಂದೆ ಇದರ ಬಳಕೆಯಾದ ಉದಾಹರಣೆ ಇಲ್ಲ. ಆದರೆ, ಈ ಪ್ರಕರಣದ ಬಗ್ಗೆ ಯಾವುದೇ ಆ್ಯಪ್ ಕಂಪನಿಗಳು ದೂರು ನೀಡಿಲ್ಲ. ನಮ್ಮ ಪೊಲೀಸ್ ಅಧಿಕಾರಿಗಳೇ ಪತ್ತೆ ಮಾಡಿದ್ದಾರೆ. ಬಿ.ದಯಾನಂದ್ - ಬೆಂಗಳೂರು ನಗರ ಪೊಲೀಸ್ ಆಯುಕ್ತ
ಇದನ್ನೂ ಓದಿ: ರೆವಿನ್ಯೂ ಸ್ಟ್ಯಾಂಪ್ ಮಾದರಿಯಲ್ಲಿ ಅಪಾಯಕಾರಿ ಡ್ರಗ್ ಸೇಲ್: 2 ದಶಕದಲ್ಲೇ ಅತಿ ದೊಡ್ಡ ಜಾಲ ಭೇದಿಸಿದ ಎನ್‌ಸಿಬಿ
ಇತ್ತೀಚೆಗಷ್ಟೇ ಬೆಸ್ಕಾಂನಲ್ಲಿ ಕಿರಿಯ ಸಹಾಯಕನ ಹುದ್ದೆಗೆ ನೇಮಕವಾಗಿರುವಂತೆ ನಕಲಿ ನೇಮಕಾತಿ ಪತ್ರ ಸಲ್ಲಿಸಿದ್ದ ಆರೋಪ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ನೇಮಕಾತಿ ಪತ್ರ ಸಲ್ಲಿಸಿದ್ದ ವ್ಯಕ್ತಿ ಹಾಗೂ ಆತನಿಗೆ ನಕಲಿ ಪತ್ರ ಮಾಡಿಕೊಟ್ಟ ಆರೋಪಿಗಳ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ವೈಭವ್ ವೆಂಕಟೇಶ್, ಶಿವಪ್ರಸಾದ್, ವಿಜಯ್ ಕುಮಾರ್, ಪ್ರದೀಪ್ ಹಾಗೂ ಪುರುಷೋತ್ತಮ್ ಎಂಬಾತನ ವಿರುದ್ಧ ಹೈಗ್ರೌಂಡ್ಸ್ ಪೊಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಮೇ 22ರಂದು ಮಧ್ಯಾಹ್ನ ಕ್ರೆಸೆಂಟ್ ರಸ್ತೆಯ ಬೆಸ್ಕಾಂ ಕಚೇರಿಗೆ ಬಂದಿದ್ದ ವೈಭವ್ ವೆಂಕಟೇಶ್, ಬೆಸ್ಕಾಂ ಕಿರಿಯ ಸಹಾಯಕ ಹುದ್ದೆಗೆ ನೇಮಕವಾಗಿರುವ ಪತ್ರ ಸಲ್ಲಿಸಿದ್ದನು. ಈ ಪತ್ರವನ್ನು ಕಂಡ ಕಾರ್ಯನಿರ್ವಾಹಕ ಇಂಜಿನಿಯರ್, ಅಧೀಕ್ಷಕ ಇಂಜಿಯರ್ ಹೆಸರಿನ ನಕಲಿ ಸೀಲ್ ಮತ್ತು ನಕಲಿ ಸಹಿ ಇರುವುದನ್ನು ಗಮನಿಸಿದ್ದರು. ಅಧೀಕ್ಷಕ ಇಂಜಿನಿಯರ್ ಮೂಲಕವೇ ಪರಿಶೀಲಿಸಿದಾಗ ಪತ್ರ ನಕಲಿ ಎಂಬುದು ಬೆಳಕಿಗೆ ಬಂದಿತ್ತು. ವೈಭವ್ ವೆಂಕಟೇಶ್ ಬಳಿ ಪತ್ರದ ಬಗ್ಗೆ ವಿಚಾರಿಸಿದಾಗ, ಆರೋಪಿಗಳಾದ ಶಿವಪ್ರಸಾದ್, ವಿಜಯ್ ಕುಮಾರ್, ಪ್ರದೀಪ್ ಹಾಗೂ ಪುರುಷೋತ್ತಮ್ 20 ಲಕ್ಷ ಪಡೆದು ನಕಲಿ ನೇಮಕಾತಿ ಪತ್ರ ನೀಡಿರುವುದು ಬಯಲಾಗಿತ್ತು.
ಇದನ್ನೂ ಓದಿ: ನನಗೆ, ನನ್ನ ಕುಟುಂಬಕ್ಕೆ ಫ್ರೀ ಯೋಜನೆಗಳು ಬೇಡ; ಬಡವರಿಗೆ ಯಾವುದೇ ಕಂಡೀಶನ್ ಇಲ್ಲದೆ ಕೊಡಿ : ಎಂ ಪಿ ರೇಣುಕಾಚಾರ್ಯ